ಹಾವೇರಿ: ಉಕ್ರೇನ್ ಮತ್ತು ರಷ್ಯಾ ನಡುವಿನ ಯುದ್ಧದ ಸಂದರ್ಭದಲ್ಲಿ ಸಾವನ್ನಪ್ಪಿದ್ದ ಕನ್ನಡಿಗ ವಿದ್ಯಾರ್ಥಿ ನವೀನ್ ಪಾರ್ಥಿವ ಶರೀರ ಬೆಂಗಳೂರಿನಿಂದ ಸ್ವಗ್ರಾಮದತ್ತ ಆಗಮಿಸುತ್ತಿದ್ದು, ಕುಟುಂಬಸ್ಥರು ಅಂತಿಮ ಪೂಜಾ ಕಾರ್ಯಗಳಿಗೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ.
ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಚಳಗೇರಿ ಗ್ರಾಮದಲ್ಲಿರುವ ನವೀನ್ ನಿವಾಸದಲ್ಲಿ ಅಂತಿಮ ಪೂಜೆಗಳು ನಡೆಯಲಿದ್ದು, ಎಲ್ಲ ರೀತಿಯ ಸಿದ್ಧತೆಗಳು ನಡೆಯುತ್ತಿದೆ. ಇನ್ನು ನವೀನ್ ಪಾರ್ಥಿವ ಶರೀರದ ಸಾರ್ವಜನಿಕ ದರ್ಶನಕ್ಕೂ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ವೀರಶೈವ ಸಂಪ್ರದಾಯದ ವಿಧಿ - ವಿಧಾನಗಳಂತೆ ಪಾರ್ಥಿವ ಶರೀರದ ಪೂಜಾ ಕಾರ್ಯಗಳು ನಡೆಯಲಿದ್ದು, ಗಣಪತಿ ಪೂಜೆಯೊಂದಿಗೆ ಪೂಜಾ ಕಾರ್ಯಗಳು ನಡೆಯಲಿವೆ. ಸಾರ್ವಜನಿಕರ ಅನುಕೂಲಕ್ಕಾಗಿ ಅರ್ಧ ಗಂಟೆಯಲ್ಲಿ ಪೂಜಾ ಕೆಲಸಗಳನ್ನು ಪೂರ್ಣ ಮಾಡಲಾಗುವುದು ಎಂದು ಚನ್ನವೀರಯ್ಯ ಶಾಸ್ತ್ರಿಗಳು ಹೇಳಿದರು.
ಇತ್ತ ಪುತ್ರನ ಫೋಟೋಗೆ ಪೂಜೆ ಸಲ್ಲಿಸಿ ಮಗನನ್ನು ನೆನೆದು ತಾಯಿ ವಿಜಯಲಕ್ಷ್ಮಿ ಕಣ್ಣೀರಿಟ್ಟಿದ್ದು, ಪಾರ್ಥಿವ ಶರೀರ 9 ಗಂಟೆಗೆ ಚಳಗೇರಿಯನ್ನು ತಲುಪಲಿದೆ ಎಂದು ಮೃತ ನವೀನ್ ತಂದೆ ತಿಳಿಸಿದ್ದಾರೆ.
ಇದನ್ನೂ ಓದಿ: 21 ದಿನಗಳ ನಂತರ ತಾಯ್ನಾಡಿಗೆ ಬಂದ ನವೀನ್ ಪಾರ್ಥಿವ ಶರೀರ..ಸಿಎಂಗೆ ಧನ್ಯವಾದ ಸಮರ್ಪಿಸಿದ ಕುಟುಂಬ