ಹಾವೇರಿ: ಜಿಲ್ಲೆಯ ಬ್ಯಾಡಗಿ ತಾಲೂಕಿನ ಕೆರವಡಿ ಗ್ರಾಮದ ಪರಮೇಶಪ್ಪ ಮತ್ತು ಜಯಮ್ಮ ಅವರದ್ದು ಬಡ ಕುಟುಂಬ. ಈ ದಂಪತಿಯ ಮಗ ರಾಹುಲ್ ವಿದ್ಯೆಯಲ್ಲಿ ಶ್ರೀಮಂತ. ಪ್ರತಿಭೆ ಗುಡಿಸಲಲ್ಲಿ ಅರಳುತ್ತದೆ ಎಂಬ ಮಾತಿಗೆ ಅವರ ಮಗ ಸಾಧಿಸಿ ತೋರಿಸಿದ್ದಾನೆ. ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅಪ್ರತಿಮ ಸಾಧನೆ ಮಾಡುವ ಮೂಲಕ ಗಮನ ಸೆಳೆದಿದ್ದಾನೆ. ಬಡತನದ ಬೇಗುದಿಯಲ್ಲಿ ಸಹ ರಾಹುಲ್ ಪಿಯುಸಿಯಲ್ಲಿ ಪ್ರತಿಶತ 98.33 ಅಂಕ ಗಳಿಸಿದ್ದಾನೆ.
ರಾಹುಲ್ ಶನಿವಾರ್ ಪ್ರಕಟವಾದ ಪಿಯುಸಿ ವಿಜ್ಞಾನ ವಿಭಾಗದಲ್ಲಿ ನೂರಕ್ಕೆ 98.33 ಅಂಕ ಗಳಿಸುವ ಮೂಲಕ ಗಮನ ಸೆಳೆದಿದ್ದಾನೆ. ಶಿವಮೊಗ್ಗ ಜಿಲ್ಲೆ ಶಿಕಾರಿಪುರದ ಹೊಸೂರು ಮೊರಾರ್ಜಿ ವಸತಿ ಪಿಯು ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ರಾಹುಲ್ ಮೂರು ವಿಷಯಗಳಲ್ಲಿ ನೂರಕ್ಕೆ ನೂರು ಅಂಕ ಪಡೆದಿದ್ದಾನೆ.
ಗಣಿತ, ಬಯೋಲಜಿ, ವಿಜ್ಞಾನ ವಿಷಯಗಳಲ್ಲಿ ರಾಹುಲ್ ನೂರಕ್ಕೆ ನೂರು ಅಂಕ ಪಡೆದಿದ್ದಾನೆ. ಉಳಿದಂತೆ ಭೌತಶಾಸ್ತ್ರದಲ್ಲಿ 99, ಕನ್ನಡದಲ್ಲಿ 97 ಮತ್ತು ಇಂಗ್ಲಿಷ್‌ನಲ್ಲಿ 94 ಅಂಕ ಗಳಿಸಿದ್ದಾನೆ. ಮನೆಯಲ್ಲಿ ಬಡತನ ಇರುವುದರಿಂದ ನವೋದಯ ಶಾಲೆಗೆ ಪ್ರಯತ್ನಿಸಿದ್ದಕ್ಕೆ ಸಿಕ್ಕಿದ್ದು ಮೊರಾರ್ಜಿ ವಸತಿ ಶಾಲೆ. ಆರನೇ ತರಗತಿಯಿಂದ ಮೊರಾರ್ಜಿ ವಸತಿ ಶಾಲೆಯಲ್ಲಿ ವ್ಯಾಸಂಗ ಆರಂಭಿಸಿದ ರಾಹುಲ್ ಮೊರಾರ್ಜಿ ಸರ್ಕಾರಿ ಪಿಯು ಕಾಲೇಜಿನಲ್ಲಿದ್ದುಕೊಂಡೇ ಈ ಸಾಧನೆ ಮಾಡಿದ್ದಾನೆ. ಮೊರಾರ್ಜಿ ವಸತಿ ಕಾಲೇಜಿನ ಶಿಕ್ಷಕರ ಮತ್ತು ಪೋಷಕರ ಪ್ರೋತ್ಸಾಹದಿಂದ ಈ ಸಾಧನೆ ಮಾಡಲು ಸಾಧ್ಯವಾಯಿತು ಎನ್ನುತ್ತಾನೆ ರಾಹುಲ್.
ಮೂರು ಎಕರೆ ಜಮೀನಿನಲ್ಲಿ ಕೃಷಿ .. ರಾಹುಲ್ ತಂದೆ ಎರಡು ಹಸುಗಳನ್ನ ಸಾಕಿಕೊಂಡು ಜಮೀನು ಮಾಡುತ್ತಿದ್ದಾರೆ. ಇರುವ ಮೂರು ಎಕರೆ ಜಮೀನಿನಲ್ಲಿ ಕೃಷಿ ಮಾಡುತ್ತಾರೆ. ಉಳಿದಂತೆ ಬೇರೆ ಯಾರಾದರೂ ಕರೆದರೆ ಕೂಲಿ ಕಾರ್ಮಿಕರಾಗಿ ದುಡಿಯುತ್ತಾರೆ. ರಾಹುಲ್ ತಾಯಿ ಜಯಮ್ಮ ಗೃಹಿಣಿಯಾಗಿದ್ದಾರೆ. ಈ ದಂಪತಿಗೆ ಇಬ್ಬರು ಮಕ್ಕಳಿದ್ದು, ರಾಹುಲ್ ಎರಡನೆಯವನು.
![ಹಸು ಮೇಯಿಸುತ್ತಿರುವ ರಾಹುಲ್](https://etvbharatimages.akamaized.net/etvbharat/prod-images/kn-hvr-01-poor-toper-7202143_19062022175237_1906f_1655641357_53.png)
ಮನೆಯಲ್ಲಿರುವ ಆಕಳುಗಳ ನಿಭಾಯಿಸುವ ಜವಾಬ್ದಾರಿ ರಾಹುಲ್‌ನದ್ದು. ಹಕ್ಕಿಮನೆಯಲ್ಲಿ ಸೆಗಣಿ ಕಸ ತೆಗೆಯುವುದರಿಂದ ಹಿಡಿದು ಆಕಳುಗಳನ್ನು ಮೇಯಿಸಿಕೊಂಡು ಬರಲು ರಾಹುಲ್ ಹೋಗುತ್ತಾನೆ. ದಿನಕ್ಕೆ ಆರರಿಂದ ಎಂಟು ಗಂಟೆ ಓದುತ್ತಿದ್ದೆ, ಶಿಕ್ಷಕರು ಪ್ರೋತ್ಸಾಹದಿಂದ ತಾನು ಈ ಸಾಧನೆ ಮಾಡಲು ಸಾಧ್ಯವಾಯಿತು ಎನ್ನುತ್ತಾರೆ ರಾಹುಲ್. ಅಲ್ಲದೆ, ಐಐಟಿ, ಜೆಡಬ್ಲೂ ಪರೀಕ್ಷೆ ಬರೆಯುವ ಇಂಗಿತವನ್ನ ವ್ಯಕ್ತಪಡಿಸಿದ್ದಾನೆ.
ಓದಿ: ಅಗ್ನಿಪಥ್ ಹಿಂಸಾಚಾರದ ಹಿಂದೆ ಯಾರಿದ್ದಾರೆಂಬುದು ಗೊತ್ತಿದೆ: ಸಚಿವ ಕಾರಜೋಳ