ಹಾನಗಲ್: ಸುರಳೇಶ್ವರ ಗ್ರಾಮದಲ್ಲಿ ಕಳೆದ ಎಂಟು ವರ್ಷಗಳಿಂದ ಗೋ ಮಾತೆ ಮೂರ್ತಿಗೆ ಪೂಜೆ ಸಲ್ಲಿಸಿ ಜನರು ಭಕ್ತಿ ಮೆರೆಯುತ್ತಿದ್ದಾರೆ.
ಪ್ರಾಣಿಗಳು ಸಾವನ್ನಪ್ಪಿದರೆ ಅವುಗಳನ್ನ ಕೆಲವರು ಪೂಜೆ ಪುನಸ್ಕಾರ ಮಾಡಿ ಅಂತ್ಯ ಸಂಸ್ಕಾರ ಮಾಡುತ್ತಾರೆ. ಆದ್ರೆ ಜಿಲ್ಲೆಯ ಹಾನಗಲ್ ತಾಲೂಕಿನ ಸುರಳೇಶ್ವರ ಗ್ರಾಮದಲ್ಲಿ ಕಳೆದ ಎಂಟು ವರ್ಷಗಳ ಹಿಂದೆ ಗ್ರಾಮ ದೇವತೆಗೆಂದು ಬಿಟ್ಟಿದ್ದ ಹಸುವೊಂದು ಬಸ್ ಅಪಘಾತದಲ್ಲಿ ಮೃತಪಟ್ಟಿತ್ತು. ಗ್ರಾಮದ ಜನರ ಅಪಾರ ಪ್ರೀತಿ ಗಳಿಸಿದ್ದ ಆ ಕಾಮಧೇನುವಿನ ಅಗಲಿಕೆ ಅದೆಷ್ಟೋ ಜನರಿಗೆ ಬೇಸರ ತರಿಸಿತ್ತು. ಗ್ರಾಮಸ್ಥರು ಈ ದುಃಖವನ್ನು ಸಹಿಸಲಾರದೆ ಗ್ರಾಮದ ಹೊರವಲಯದಲ್ಲಿರುವ ಬಸವೇಶ್ವರ ದೇವಸ್ಥಾನದ ಎದುರು ಧಾರ್ಮಿಕ ವಿಧಿ ವಿಧಾನಗಳ ಮೂಲಕ ಅಂತ್ಯ ಸಂಸ್ಕಾರ ನೆರವೇರಿಸಿದ್ದರು.
ನಂತರದ ದಿನಗಳಲ್ಲಿ ಗ್ರಾಮದ ಜನರು ಅಂತ್ಯ ಸಂಸ್ಕಾರ ಮಾಡಿದ ಜಾಗದಲ್ಲೇ ಗೋ ಮಾತೆಯ ಮೂರ್ತಿಯನ್ನು ಸ್ಥಾಪಿಸಿ ಸುತ್ತಲೂ ಕಬ್ಬಿಣದ ಮಂಟಪ ನಿರ್ಮಿಸಿ ಪೂಜೆ ಸಲ್ಲಿಸಲು ಪ್ರಾರಂಭಿಸಿದರು. ಪ್ರತಿ ದೀಪಾವಳಿಯ ದಿನದಂದು ವಿವಿಧ ಬಗೆಯ ಬಣ್ಣಗಳ ರಿಬ್ಬನ್ ಕಟ್ಟಿ ಶೃಂಗಾರಗೊಳಿಸುತ್ತಾರೆ. ಅಷ್ಟೇ ಅಲ್ಲದೆ ಅಂದಿನ ದಿನ ಸಿಹಿ ಅಡುಗೆಯನ್ನ ಮಾಡಿ ನೈವೇದ್ಯ ಇಡುತ್ತಾರೆ. ಗ್ರಾಮದಲ್ಲಿ ಯಾವುದೇ ಹಬ್ಬ, ಹರಿ ದಿನಗಳು ಬಂದ್ರೆ ಈ ಕಾಮಧೇನುವಿಗೆ ಪೂಜೆ ಸಲ್ಲಿಸಿ ಭಕ್ತಿ ಮೆರೆಯುತ್ತಾರೆ.