ರಾಣೆಬೆನ್ನೂರು: ಕೊರೊನಾ ತಡೆಯುವ ಸಲುವಾಗಿ ಶಾಸಕ ಅರುಣಕುಮಾರ ಪೂಜಾರ ಜುಲೈ 15ರಿಂದ ಜುಲೈ 20ರವರಗೆ ಸ್ವಯಂಪ್ರೇರಿತ ಲಾಕ್ಡೌನ್ ಮಾಡಿಕೊಳ್ಳುವಂತೆ ಜನರಿಗೆ ಮತ್ತು ವರ್ತಕರಿಗೆ ಮನವಿ ಮಾಡಿಕೊಂಡಿದ್ದರು.
ಆದರೆ ಜನತೆ ಶಾಸಕರ ಮನವಿಗೂ ಸ್ಪಂದಿಸದೆ ನಗರದಲ್ಲಿ ವ್ಯಾಪಾರ ವಹಿವಾಟು ಎಂದಿನಂತೆ ಪ್ರಾರಂಭ ಮಾಡಿದ್ದಾರೆ. ಇದರಿಂದ ನಗರದಲ್ಲಿ ಯಾವುದೇ ಸ್ವಯಂಪ್ರೇರಿತ ಲಾಕ್ಡೌನ್ ಮಾಡಲು ಜನರು ಮತ್ತು ವರ್ತಕರು ಮುಂದಾಗಿಲ್ಲ ಎಂಬುದು ಕಂಡು ಬಂದಿದೆ. ಪಂಚಮಿ ಹಬ್ಬದ ಹಿನ್ನೆಲೆಯಲ್ಲಿ ಗ್ರಾಮಾಂತರ ಜನರು ಸಂತೆ ಮಾಡಲು, ಬಟ್ಟೆಗಳನ್ನು ಕೊಳ್ಳಲು ನಗರಕ್ಕೆ ಆಗಮಿಸಿದ್ದರಿಂದ ಬಟ್ಟೆ ಅಂಗಡಿಗಳಲ್ಲಿ ಜನಸಂದಣಿ ಹೆಚ್ಚಾಗಿ ಕಂಡು ಬಂತು.
ಜನರಿಗೆ ಗೊಂದಲ ಮೂಡಿಸಿದ ಶಾಸಕ ಮತ್ತು ಜಿಲ್ಲಾಡಳಿತದ ಪ್ರಕಟಣೆ: ಶಾಸಕ ಅರುಣಕುಮಾರ ಪೂಜಾರ ಕೊರೊನಾ ತಡೆಯುವ ಸಲುವಾಗಿ ನಗರವನ್ನು ಸ್ವಯಂ ಪ್ರೇರಿತವಾಗಿ ಲಾಕ್ಡೌನ್ ಮಾಡಿಕೊಳ್ಳಲು ಜನರಿಗೆ ಮನವಿ ಮಾಡಿ ಪ್ರಕಟಣೆ ಹೊರಡಿಸಿದ್ದರು. ನಂತರ ಜಿಲ್ಲಾಧಿಕಾರಿ ಇದಕ್ಕೆ ಪ್ರತಿಯಾಗಿ ರಾಣೆಬೆನ್ನೂರು ನಗರದಲ್ಲಿ ಜಿಲ್ಲಾಡಳಿತ ಯಾವುದೇ ಲಾಕ್ಡೌನ್ ಆದೇಶ ಹೊರಡಿಸಿಲ್ಲ ಎಂದು ಪ್ರಕಟಣೆ ಹೊರಡಿಸಿತ್ತು.
ಇದರಿಂದ ಗೊಂದಲಕ್ಕೆ ಒಳಗಾದ ನಗರದ ಜನರು ಯಾರ ಮನವಿಗೆ ಸ್ಪಂದಿಸಬೇಕು ಎಂಬುದು ತಿಳಿಯದಂತಾಗಿತ್ತು. ಇದರಿಂದ ಜನರು ಯಾರು ಮಾತಿಗೂ ಕಿವಿಗೊಡದೆ ಎಂದಿನಂತೆ ತಮ್ಮ ವ್ಯಾಪಾರ ವಹಿವಾಟು ಶುರು ಮಾಡಿದ್ದಾರೆ.