ರಾಣೆಬೆನ್ನೂರು: ನಗರದ ತಾಲೂಕು ಆಡಳಿತ ಕಚೇರಿಯ ಮುಂಭಾಗ ವಾಹನ ನಿಲುಗಡೆಯೇ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ.
ಹೌದು, ನಿತ್ಯವು ತಾಲೂಕಿನ ಸಾವಿರಾರು ಜನರು ತಮ್ಮ ಕಾಗದ ಪತ್ರಗಳ ನೋಂದಣಿ ಅಥವಾ ಇತರೆ ಕೆಲಸಗಳಿಗಾಗಿ ತಾಲೂಕು ಕಚೇರಿಗೆ ಬರುತ್ತಿರುತ್ತಾರೆ. ಈ ವೇಳೆ ತಮ್ಮ ಸ್ವಂತ ವಾಹನಗಳನ್ನು ಅದರಲ್ಲೂ ದ್ವಿಚಕ್ರ ವಾಹನಗಳನ್ನು ಹೆಚ್ಚಾಗಿ ತೆಗೆದುಕೊಂಡು ಬರುವ ಸಾರ್ವಜನಿಕರು ಹೇಗೆಂದರೆ ಹಾಗೆ ಗಾಡಿಗಳನ್ನು ನಿಲ್ಲಿಸುತ್ತಾರೆ. ವಾಹನ ನಿಲುಗಡೆ ಮಾಡಲು ವಿಶಾಲವಾದ ಜಾಗವಿದ್ದರೂ ಸಾರ್ವಜನಿಕರು ಮಾತ್ರ ಗಾಡಿಗಳನ್ನು ಅಡ್ಡಾದಿಡ್ಡಿಯಾಗಿ ನಿಲ್ಲಿಸುವುದರಿಂದ ಇತರರಿಗೆ ಕಚೇರಿಗೆ ಹೋಗಲು ಸಮಸ್ಯೆಯಾಗಿದ್ದು, ಸಂಚಾರ ದಟ್ಟಣೆ ಕೂಡ ಹೆಚ್ಚಾಗಿದೆ.
ಇನ್ನು, ಕಚೇರಿ ಅಧಿಕಾರಿಗಳು ತಮ್ಮ ವಾಹನಗಳನ್ನು ಕಚೇರಿಯ ಪಾರ್ಕಿಂಗ್ ಒಳಗಡೆ ನಿಲ್ಲಿಸುತ್ತಾರೆ. ಅಷ್ಟೇ ಅಲ್ಲದೇ, ತಹಶಿಲ್ದಾರರು ಕಾರು ನಿಲ್ಲಿಸಬೇಕಾದ ಜಾಗವನ್ನೂ ಸಾರ್ವಜನಿಕ ದ್ವಿಚಕ್ರ ವಾಹನಗಳು ಆಕ್ರಮಿಸುತ್ತಿವೆ ಎನ್ನಲಾಗ್ತಿದೆ. ಹೊರಗಿನ ಜನರು ಎಲ್ಲೆಂದರಲ್ಲಿ ವಾಹನಗಳನ್ನು ನಿಲ್ಲಿಸುತ್ತಿರುವುದು ಅಧಿಕಾರಿಗಳಿಗೆ ತಲೆನೋವಾಗಿದೆ.
ಅಧಿಕಾರಿಗಳು ಹಾಗೂ ಪೊಲೀಸರು ಅನೇಕ ಬಾರಿ ವಾಹನ ನಿಲುಗಡೆ ಬಗ್ಗೆ ಅರಿವು ಮೂಡಿಸಿದ್ದಾರೆ. ಜೊತೆಗೆ ಬುದ್ಧಿ ಕಲಿಸುವ ಸಲುವಾಗಿ ಕಚೇರಿಯ ಸಿಬ್ಬಂದಿ ಅನೇಕ ಬಾರಿ ದ್ವಿಚಕ್ರ ವಾಹನಗಳ ಗಾಳಿ ತಗೆದರೂ ಕೂಡ ಸಾರ್ವಜನಿಕರು ಮತ್ತೆ ಅಲ್ಲಿಯೇ ವಾಹನಗಳನ್ನು ಪಾರ್ಕಿಂಗ್ ಮಾಡುತ್ತಿರುವುದು ನಿಜಕ್ಕೂ ಬೇಸರದ ಸಂಗತಿ.