ಹಾವೇರಿ: ರಾಣೆಬೆನ್ನೂರು ತಾಲೂಕಿನ ಚಳಗೇರಿಯ ನವೀನ್ ಎಂಬ ವಿದ್ಯಾರ್ಥಿ ರಷ್ಯಾ-ಉಕ್ರೇನ್ ಯುದ್ದದ ಸಮಯದಲ್ಲಿ ಬಾಂಬ್ ದಾಳಿಯಲ್ಲಿ ಸಾವನ್ನಪ್ಪಿ ಮಾರ್ಚ್ ಒಂದಕ್ಕೆ ಒಂದು ವರ್ಷವಾಗುತ್ತದೆ. ಶೇಖರಗೌಡ ಮತ್ತು ವಿಜಯಲಕ್ಷ್ಮಿ ದಂಪತಿಗೆ ದ್ವಿತೀಯ ಪುತ್ರನಾಗಿ ಜನಿಸಿದ್ದ ನವೀನ್ ಅವರಿಗೆ ವೈದ್ಯನಾಗಿ ಬಂದು ತಂದೆ, ತಾಯಿ ಮತ್ತು ಅಣ್ಣನಿಗೆ ಸುಂದರವಾದ ಮನೆ ಕಟ್ಟಿಸಿ ಕೊಡಬೇಕು ಎಂಬ ಆಸೆ ಇತ್ತಂತೆ. ಆದರೆ ಯುದ್ದದಲ್ಲಿ ಅವರು ಸಾವನ್ನಪ್ಪಿದ್ದರು.
ಹೀಗಾಗಿ ಮನೆ ಕಟ್ಟುವ ಕನಸು ಕನಸಾಗಿಯೇ ಉಳಿದಿತ್ತು. ಈಗ ತಂದೆ ಶೇಖರಗೌಡ, ತಾಯಿ ವಿಜಯಲಕ್ಷ್ಮಿ, ಅಣ್ಣ ಹರ್ಷ ಅವರು ಸೇರಿ ನವೀನ್ ಅವರ ಸ್ಮರಣಾರ್ಥ ಚಳಗೇರಿಯ ತಮ್ಮ ನಿವಾಸದ ಪಕ್ಕದಲ್ಲಿ ಸುಂದರವಾದ ಮನೆ ಕಟ್ಟಿಸಿದ್ದಾರೆ. ಆ ಮನೆಗೆ ನವೀನ ನಿವಾಸ ಎಂದು ಹೆಸರಿಟ್ಟಿದ್ದಾರೆ. ಮನೆಗೆ ಕಾಲಿಡುತ್ತಿದ್ದಂತೆ ಗ್ರಾನೈಟ್‌ನಲ್ಲಿ ನವೀನ್ ಅವರ ಭಾವಚಿತ್ರವನ್ನು ಕೆತ್ತಿಸಲಾಗಿದೆ. ಇದೇ 17 ರಂದು ಪ್ರಥಮ ವರ್ಷದ ಪುಣ್ಯತಿಥಿ ಮತ್ತು ನವೀನ ನಿವಾಸದ ಗೃಹ ಪ್ರವೇಶ ನಡೆಯಲಿದೆ. ಹಿಂದು ಸಂಪ್ರದಾಯದ ಪ್ರಕಾರ ಮನೆಯಲ್ಲಿ ನಿಧನ ನಡೆದ ನಂತರ ಮೊದಲ ವರ್ಷ ತುಂಬುವ ಮೊದಲೇ ಮನೆಯಲ್ಲಿ ಶುಭಕಾರ್ಯ ಮಾಡಬೇಕು. ಈ ಹಿನ್ನೆಲೆಯಲ್ಲಿ ಶೇಖರಗೌಡ ದಂಪತಿ ಇದೇ 17 ರಂದು ಗೃಹಪ್ರವೇಶ ಇಟ್ಟುಕೊಂಡಿದ್ದಾರೆ.
ವ್ಯಾಸಂಗ ಮುಗಿಯುವವರೆಗೆ ತಗಡಿನ ಶೆಡ್ ಮನೆಯಲ್ಲಿ ಇರೋಣ. ನಾನು ವ್ಯಾಸಂಗ ಮುಗಿಸಿ ಬಂದ ಮೇಲೆ ಸುಂದರ ಮನೆಯಲ್ಲಿ ಒಟ್ಟಿಗಿರೋಣ ಎಂದಿದ್ದ ಮಗ ಈಗ ಇಲ್ಲ. ಆತನ ನೆನಪನ್ನು ಚಿರಸ್ಥಾಯಿಯಾಗಿಸಲು ದಂಪತಿ ಮನೆ ಕಟ್ಟಿಸಿದ್ದಾರೆ. "ನನ್ನ ಮಗ ವೈದ್ಯನಾಗಿ ಈ ಶೆಡ್‌ನಲ್ಲಿ ಗ್ರಾಮೀಣ ಜನರ ಸೇವೆ ಮಾಡಬೇಕು ಎಂದು ಕನಸು ಕಂಡಿದ್ದ. 2021ರಲ್ಲಿ ಗ್ರಾಮಕ್ಕೆ ಬಂದಾಗ ಮನೆ ಕಟ್ಟಿಸುವುದು ಸದ್ಯ ಬೇಡ. ಇನ್ನೆರಡು ವರ್ಷ ಕಳೆದರೆ ನನ್ನ, ಅಣ್ಣನ ವ್ಯಾಸಂಗ ಮುಗಿಯುತ್ತದೆ. ನಾವೇ ಮನೆ ಕಟ್ಟುತ್ತೇವೆ ಎಂದಿದ್ದ. ಅವನ ಆಸೆಯನ್ನು ದೇವರು ಈಡೇರಿಸಲಿಲ್ಲ. ಅವನ ನೆರಳಲ್ಲಿ ನಾವು ವಾಸಿಸೋಣ ಎಂದು ಮನೆ ಕಟ್ಟಿದ್ದೇವೆ" ಎಂದು ಶೇಖರಗೌಡ ತಿಳಿಸಿದರು.
ಶಿವರಾತ್ರಿ ಹಿಂದಿನ ದಿನ ಗೃಹ ಪ್ರವೇಶ ಇಟ್ಟುಕೊಂಡಿದ್ದು ಮಹಾಂತಸ್ವಾಮಿಗಳ ಪಾದಪೂಜೆ ಮಾಡುವ ಮೂಲಕ ನೂತನ ಗೃಹದ ಉದ್ಘಾಟನೆ ನಡೆಸಲಾಗುವುದು ಎಂದು ಅವರು ಹೇಳಿದರು. ನವೀನ ನಿಲಯ ಕುರಿತಂತೆ ಮಾತನಾಡಲು ಮುಂದಾದ ತಾಯಿ ಭಾವುಕರಾದರು. ನವೀನನಿಗೆ ಬೆಟ್ಟದಷ್ಟು ಕನಸಿತ್ತು. ಅದನ್ನೆಲ್ಲ ಈಡೇರಿಸಲು ನಮಗೆ ಆಗಲಿಲ್ಲ. ನಾವಿದ್ದ ಶೆಡ್‌ನಲ್ಲಿ ಕ್ಲಿನಿಕ್ ಮಾಡೋಣ. ಪಕ್ಕದಲ್ಲಿದ್ದ ಜಾಗದಲ್ಲಿ ಮನೆ ಕಟ್ಟುವ ಎಂದು ಹೇಳಿದ್ದ ಎಂದು ಕಣ್ಣೀರು ಹಾಕಿದರು.
ಇದನ್ನೂ ಓದಿ: ರಷ್ಯಾ ಉಕ್ರೇನ್ ಯುದ್ಧದಲ್ಲಿ ಮೃತಪಟ್ಟ ನವೀನ್ ಹುಟ್ಟುಹಬ್ಬ ಆಚರಣೆ