ಹಾವೇರಿ/ಬೆಂಗಳೂರು : ಈ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಸ್ಪಷ್ಟ ಬಹುಮತ ಸಿಕ್ಕಿದ್ದು, ಕಾಂಗ್ರೆಸ್ ಗೆಲ್ಲಲು ಮುಸ್ಲಿಂರು ಪ್ರಮುಖ ಪಾತ್ರ ವಹಿಸಿರುವುದರಿಂದ ತಮ್ಮ ಸಮುದಾಯದ ನಾಯಕರಿಗೆ ಮಂತ್ರಿ ಮಂಡಲದಲ್ಲಿ ಸ್ಥಾನ ನೀಡುವಂತೆ ರಾಜ್ಯದೆಲ್ಲೆಡೆ ಮುಸ್ಲಿಂ ಸಮುದಾಯಗಳು ಒತ್ತಾಯಿಸುತ್ತಿವೆ. ಇದರ ಬೆನ್ನಲ್ಲೇ ಮುಸ್ಲಿಂ ಸಮುದಾಯದ ಒಬ್ಬರಿಗೆ ಉಪಮುಖ್ಯಮಂತ್ರಿ ಸ್ಥಾನ ಹಾಗೂ ಐವರಿಗೆ ಸಚಿವ ಸ್ಥಾನ ನೀಡುವಂತೆ ವಕ್ಫ್ ಬೋರ್ಡ್ ಅಧ್ಯಕ್ಷ ಶಾಫಿ ಸಅದಿ ಬೆಂಗಳೂರಿನಲ್ಲಿ ಆಗ್ರಹಿಸಿದ್ದಾರೆ.
ಇದನ್ನೂ ಓದಿ : ದಿಲ್ಲಿಯತ್ತ ಕೈ ನಾಯಕರು: ಮಹಾನಗರದಲ್ಲಿ ಸಿದ್ದು, ಡಿಕೆಶಿ ಮನೆ ಮುಂದೆ ಅಭಿಮಾನಿಗಳ ದಂಡು
ಸಲಹಾ ಸಮಿತಿ ಅಧ್ಯಕ್ಷ ಪ್ರತಿಕ್ರಿಯೆ : ಮತ್ತೊಂದೆಡೆ ಹಾವೇರಿಯಲ್ಲಿ ವಕ್ಫ್ ಬೋರ್ಡ್ ಸಲಹಾ ಸಮಿತಿ ಅಧ್ಯಕ್ಷ ನಾಸೀರ್ ಖಾನ್ ಪಠಾಣ, ಇತಿಹಾಸದಲ್ಲಿಯೇ ಪ್ರಥಮ ಬಾರಿಗೆ ಮುಸ್ಲಿಂ ಸಮಾಜ ಒಂದು ಪಕ್ಷಕ್ಕೆ ಪ್ರತಿಶತ 90 ರಷ್ಟು ಮತ ನೀಡಿದೆ. ಆದು ಕಾಂಗ್ರೆಸ್ ಪಕ್ಷಕ್ಕೆ ಈ ಬಾರಿ ಅತ್ಯಧಿಕ ಮತ ನೀಡಿದ್ದು, ಕಾಂಗ್ರೆಸ್ ಪಕ್ಷ ಮುಸ್ಲಿಂರನ್ನು ಕಡೇಗಣಿಸಬಾರದು. ಮುಸ್ಲಿಂ ಸಮಾಜಕ್ಕೆ ರಾಜ್ಯದ ಕ್ಯಾಬಿನೆಟ್‌ನಲ್ಲಿ ಐದು ಜನರಿಗೆ ಸಚಿವ ಸ್ಥಾನ ನೀಡಬೇಕು ಮತ್ತು ಒಬ್ಬರಿಗೆ ಡಿಸಿಎಂ ಹುದ್ದೆ ನೀಡಬೇಕು ಎಂದು ಒತ್ತಾಯಿಸಿದರು.
ರಾಜ್ಯದ ಉದ್ದಗಲಕ್ಕೂ ಕಾಂಗ್ರೆಸ್ ಬಹುಮತ ಪಡೆಯುವಲ್ಲಿ ಮುಸ್ಲಿಂ ಸಮಾಜದ ಪಾತ್ರ ದೊಡ್ಡದಿದೆ. ಮಾಜಿ ಸಚಿವ ಜಮೀರ್ ಅಹ್ಮದ್ 80 ಕ್ಷೇತ್ರಗಳಲ್ಲಿ ಪ್ರಚಾರ ಮಾಡಿದ್ದು, ಅದರಲ್ಲಿ 69 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿದೆ. ಜಮೀರ್ ಅತಿಹೆಚ್ಚು ಮತಗಳ ಅಂತರದಿಂದ ಜಯಸಾಧಿಸಿದ್ದಾರೆ. ಇದನ್ನು ಮನಗಂಡು ಕಾಂಗ್ರೆಸ್ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕು. ಈ ಹಿಂದೆ ಎಸ್.ಎಂ. ಕೃಷ್ಣ ಮುಖ್ಯಮಂತ್ರಿಯಾಗಿದ್ದಾಗ ಅವರ ಸಚಿವ ಸಂಪುಟದಲ್ಲಿ ಐವರು ಮುಸ್ಲಿಂ ಮುಖಂಡರಿಗೆ ಸಚಿವ ಸ್ಥಾನ ನೀಡಲಾಗಿತ್ತು. ಅದೇ ರೀತಿ ಈ ಬಾರಿ ಸಹ ಕಾಂಗ್ರೆಸ್ ಮುಸ್ಲಿಂ ಸಮಾಜದ ಐದು ಜನರಿಗೆ ಸಚಿವಸ್ಥಾನ ನೀಡಬೇಕು ನಾಸೀರ್ ಖಾನ್ ಪಠಾಣ ಎಂದು ತಿಳಿಸಿದರು.
ಬಿಜೆಪಿ ಹೀನಾಯ ಸೋಲಿಗೆ ಅವರು ಅನುಸರಿಸಿದ ನೀತಿಗಳೇ ಕಾರಣ. ಧರ್ಮದ ಮೇಲೆ ರಾಜಕಾರಣ, ಮುಸ್ಲಿಂ ಸಮಾಜದ ಮೇಲೆ ಎತ್ತಿಕಟ್ಟುವಿಕೆ, ಹಲಾಲ್ ಕಟ್, ಹಿಜಾಬ್ ವಿವಾದ ಮತ್ತು ದೇವಸ್ಥಾನ ಮಠಮಂದಿರಗಳ ಮುಂದೆ ವ್ಯಾಪಾರ ಮಾಡುವುದಾಗಿರಲಿ ಸಮಾಜ ಒಡೆಯುವ ನೀತಿ. ಸಮಾಜದ 2ಬಿ ಮೀಸಲಾತಿ ಕಡಿತ ಸೇರಿದಂತೆ ವಿವಿಧ ಕಾರ್ಯಕ್ರಮಗಳೇ ಕಾರಣ ಎಂದು ನಾಸೀರ್ ಖಾನ್ ಆರೋಪಿಸಿದರು.
ಕಾಂಗ್ರೆಸ್ ಪಕ್ಷ 15 ಜನರಿಗೆ ಟಿಕೆಟ್ ನೀಡಿತ್ತು. ಅದರಲ್ಲಿ 9 ಜನ ಮುಸ್ಲಿಂ ನಾಯಕರು ಶಾಸಕರಾಗಿ ಆಯ್ಕೆಯಾಗಿ ಬಂದಿದ್ದಾರೆ. ಇವರ್ಯಾರು ಕೇವಲ ಮುಸ್ಲಿಂ ಮತಗಳಷ್ಟೇ ಅಲ್ಲದೆ ವಿವಿಧ ಸಮಾಜದ ಮತ ಪಡೆದು ಶಾಸಕರಾಗಿದ್ದಾರೆ ಎಂದು ನಾಸೀರ್ ಖಾನ್ ತಿಳಿಸಿದರು.
ಇದನ್ನೂ ಓದಿ : ಚುನಾವಣಾ ರಣಕಣದಲ್ಲಿ ಹಲವರಿಗೆ ಹೀನಾಯ ಸೋಲು: ಠೇವಣಿ ಕಳೆದ ಜೆಡಿಎಸ್, ಬಿಜೆಪಿ, ಕಾಂಗ್ರೆಸ್ ಅಭ್ಯರ್ಥಿಗಳೆಷ್ಟು?