ಹಾವೇರಿ: ಖಗೋಳ ವಿದ್ಯಮಾನಗಳು ಬಡವರ್ಗದ ಜನಸಾಮಾನ್ಯರಿಗೆ ಇಂದಿಗೂ ಕಬ್ಬಿಣದ ಕಡಲೆ. ಅದರಲ್ಲೂ ಉತ್ತರ ಕರ್ನಾಟಕದ ಜನರಿಗೆ ಈ ವಿದ್ಯಮಾನಗಳನ್ನ ತಿಳಿಸುವ ಸೂಕ್ತ ತಾರಾಲಯವಿಲ್ಲ. ಅಲ್ಲದೇ ಖಗೋಳ ವಿದ್ಯಾಮಾನ ವೀಕ್ಷಣೆಗೆ ಟೆಲಿಸ್ಕೋಪ್ ಸೇರಿದಂತೆ ವಿವಿಧ ಉಪಕರಣಗಳ ಕೈಗೆಟುಕುವ ಬೆಲೆಯಲ್ಲಿಲ್ಲ. ಮಿಲ್ಕಿವೇ, ಗ್ಯಾಲಕ್ಸಿ, ನಕ್ಷತ್ರ, ಕ್ಷುದ್ರಗೃಹ, ಧೂಮಕೇತು, ಸೌರವ್ಯೂಹ ಅಷ್ಟೇ ಯಾಕೆ ಎಷ್ಟೋ ಜನರು ಇನ್ನು ಭೂಮಿಯ ನೈಸರ್ಗಿಕ ಉಪಗೃಹ ಚಂದ್ರನ ಸರಿಯಾಗಿ ವೀಕ್ಷಣೆ ಮಾಡಿಲ್ಲ. ದೊಡ್ಡ ದೊಡ್ಡ ನಗರಗಳಲ್ಲಿ ನಿರ್ಮಿಸಲಾಗಿರುವ ತಾರಾಲಯಗಳಲ್ಲಿ ಶ್ರೀಮಂತರು, ನಗರವಾಸಿಗಳು ತಮ್ಮ ಖಗೋಳಕೌತುಕ ಕಳೆದುಕೊಳ್ಳುತ್ತಾರೆ.
ಅದೇ ಗ್ರಾಮೀಣ ಜನರು ಈ ವಿದ್ಯಮಾನಗಳನ್ನ ಕಣ್ತುಂಬಿಕೊಳ್ಳಲು ದೂರ ದೂರದ ಊರುಗಳಿಗೆ ಹೋಗಬೇಕಾಗಿದೆ. ಆದರೆ, ಈ ಕೊರತೆಯನ್ನ ನೀಗಿಸುತ್ತಿದೆ ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲೂಕಿನ ಕುನ್ನೂರು ಗ್ರಾಮದ ಬಳಿ ಸ್ಥಾಪಿತವಾಗಿರುವ ಅಸ್ಟ್ರೋ ಫಾರ್ಮ್. ಹೌದು ಇಲ್ಲಿಯ ರೈತನ ಮಗ ನಿರಂಜನ ಖಾನಗೌಡ್ರ ಉತ್ತರ ಕರ್ನಾಟಕದವರಿಗಾಗಿ ಅಸ್ಟ್ರೋ ಫಾರ್ಮ್ ನಿರ್ಮಿಸಿದ್ದಾರೆ. ಸುಮಾರು 40 ಲಕ್ಷ ರೂಪಾಯಿ ವೆಚ್ಚದಲ್ಲಿ 64 ಎಕರೆ ಭೂಮಿಯಲ್ಲಿ ಅಸ್ಟ್ರೋ ಫಾರ್ಮ ಮೈದಳೆದಿದೆ. ಹಚ್ಚ ಹಸಿರಾದ ಗುಡ್ಡಗಾಡು ಅರಣ್ಯ ಪ್ರದೇಶ ನಿಸರ್ಗ ಸೌಂದರ್ಯದ ನಡುವೆ ಅಸ್ಟ್ರೋ ಫಾರ್ಮ್ ನಿರ್ಮಾಣಗೊಂಡಿದೆ. ಜೊತೆ ಜೊತೆಗೆ ನಕ್ಷತ್ರ ಖಗೋಳ ವಿದ್ಯಮಾನಗಳನ್ನು ನೋಡಲು ಹೇಳಿ ಮಾಡಿಸಿದಂತ ತಾಣ ಇದಾಗಿದೆ ಎನ್ನುತ್ತಾರೆ ನಿರಂಜನ ನಾಗನಗೌಡ್ರ.
ಬಾಲ್ಯದಿಂದಲೂ ಖಗೋಳದಲ್ಲಿ ಆಗುವ ವಿಸ್ಮಯವನ್ನು ನೋಡವುದರ ಬಗ್ಗೆ ನನಗೆ ತುಂಬಾನೆ ಕೌತಕವಿತ್ತು. ಹೀಗಾಗಿ ನಾನು ಎಂಎಸ್ಸಿ ಪದವಿ ಆದ ಬಳಿಕ ಅಸ್ಟ್ರೋ ಟೂರಿಸಂ ಮಾಡಬೇಕೆಂಬ ಕಲ್ಪನೆ ಹುಟ್ಟಿಕೊಂಡಿತ್ತು. ಇದಕ್ಕಾಗಿ ನಾವು ಹಣ ಕ್ರೋಢೀಕರಣ ಮಾಡಿ ಅಸ್ಟ್ರೋ ಫಾರ್ಮ್ ಅನ್ನು ನಿರ್ಮಿಸಿದ್ದೇವೆ ಎಂದು ಹೇಳ್ತಾರೆ ನಿರಂಜನ ನಾಗನಗೌಡ್ರ.
ನಾವು ಶಾಲೆ ವತಿಯಿಂದ ಬಂದ ಮಕ್ಕಳಿಗೆ ವಿಶೇಷ ಪ್ಯಾಕೇಜ್ ಅಡಿ ಅವರಿಗೆ ಡಿಸ್ಕೌಂಟ್ ನೀಡುತ್ತೇವೆ. ಸದ್ಯ ಒಬ್ಬರಿಗೆ 200 ರಿಂದ 800 ರೂಪಾಯಿ ವರೆಗೆ ಟಿಕೆಟ್ ಶುಲ್ಕವಿದೆ. ಇದು ನಗರದಿಂದ ದೂರವಿದ್ದ ಕಾರಣ ಸ್ಟಾರ್ಗೇಜಿಂಗ್ಗೆ ಬಹಳ ಉಪಯುಕ್ತವಾದ ಸ್ಥಳವಾಗಿದೆ ಎನ್ನುತ್ತಾರೆ ನಿರಂಜನ.
ಮಧ್ಯದಲ್ಲಿರುವ ಸ್ಥಳದಲ್ಲಿ ದೊಡ್ಡ ದೊಡ್ಡ ಟೆಲಿಸ್ಕೋಪ್ಗಳನ್ನು ಖಗೋಳದಲ್ಲಿರುವ ಅಚ್ಚರಿಗಳನ್ನ ವೀಕ್ಷಿಸಲು ಸಿದ್ದಗೊಳಿಸಲಾಗಿದೆ. ಅಸ್ಟ್ರೋ ಫಾರ್ಮ್ ಆರಂಭಿಸಿ ಕೆಲ ತಿಂಗಳಾಗಿವೆಯಷ್ಟೇ. ಈಗಾಗಲೇ 1,500 ಜನರು ಫಾರ್ಮ್ಗೆ ಭೇಟಿ ನೀಡಿ ಖಗೋಳ ಕೌತುಕ ಕಣ್ತುಂಬಿಕೊಂಡಿದ್ದಾರೆ.
ಇನ್ನೂ ಇಲ್ಲಿಗೆ ಬರುವ ಜನರಿಗೆ ಭೋಜನದ ವ್ಯವಸ್ಥೆ ಹಾಗೂ ನ್ಯಾಚುರಲ್ ಆಗಿ ನಿರ್ಮಾಣಗೊಂಡ ಕಟ್ಟಿಗೆ ಹಂಚಿನ ಮನೆಗಳಲ್ಲಿ ಮಲಗುವ ವ್ಯವಸ್ಥೆ ಸಹ ಮಾಡಲಾಗಿದೆ. ಹಗಲು ಹಚ್ಚ ಹಸಿರಿನ ಕಾನನದ ನಡುವೆ ಗುಡ್ಡದ ಮೇಲಿಂದ ಪ್ರಕೃತಿ ಸೌಂದರ್ಯ ಸವಿದು, ರಾತ್ರಿ ಆಕಾಶದಲ್ಲಿ ಕಾಣುವ ಮಿನುಗುವ ನಕ್ಷತ್ರಗಳನ್ನ ಕಣ್ತುಂಬಿ ಕೊಳ್ಳುಬಹುದಾಗಿದೆ. ಈ ತಾಣ ಮಕ್ಕಳ ಕಲಿಕೆಗೆ ಬಹಳ ಉಪಯುಕ್ತವಾಗಿದೆ. ಅಲ್ಲದೇ ಆಕಾಶದಲ್ಲಿ ನಡೆಯುವ ವಿಸ್ಮಯಗಳ ಹಸಿವನ್ನ ನೀಗಿಸಿಕೊಳ್ಳಬಹುದಾಗಿದೆ.
ಓದಿ: ಮಾಳಿಗೆ ಮೇಲೆ ನಿಂತಿದ್ದ ಮಹಿಳೆಗೆ ಅಪ್ಪಳಿಸಿದ ಉಲ್ಕಾಶಿಲೆ; ಫ್ರಾನ್ಸ್ನಲ್ಲೊಂದು ಅಪರೂಪದ ಖಗೋಳ ವಿದ್ಯಮಾನ