ಹಾನಗಲ್ (ಹಾವೇರಿ): ಇನ್ನೂರಕ್ಕೂ ಹೆಚ್ಚು ಅಂತರ್ಜಾತಿ ಪ್ರೇಮ ವಿವಾಹ ಮಾಡಿಸಿದ ಪ್ರೇಮಿಗಳ ಪ್ರೇಮಿ ತಾಲೂಕಿನ ಬಿದರಕೊಪ್ಪ ಗ್ರಾಮದ ನಿಂಗಪ್ಪ ಕಾಳೇರ ಎಲ್ಲರಿಗೂ ಅಚ್ಚುಮೆಚ್ಚು.
ನಿಂಗಪ್ಪ ಅಂದರೆ ತಾಲೂಕಿನ ಜನತೆಗೆ ಎಲ್ಲರಿಗೂ ಪರಿಚಯ. ಪ್ರೇಮಿಗಳಿಗೆ ಮನೆಯ ಒಡೆಯನಂತೆ ಚಿರಪರಿಚಿತ. ಗ್ರಾಮದಲ್ಲಿ ಈವರೆಗೆ ಸಾವಿರಕ್ಕೂ ಹೆಚ್ಚು ಸಾಮೂಹಿಕ ವಿವಾಹಗಳನ್ನ ನೆರವೇರಿಸಿದ್ದಾರೆ. ಇವರ ಸಾಮಾಜಿಕ ಸೇವೆಯನ್ನ ಗುರುತಿಸಿ ರಾಜ್ಯ, ರಾಷ್ಟ್ರಮಟ್ಟದ ಪ್ರಶಸ್ತಿಗಳು ದೊರಕಿವೆ.
ತಮ್ಮ ಜೀವನವನ್ನ ಸಮಾಜ ಸೇವೆಗೆ ಮೀಸಲಾಗಿಟ್ಟಿರುವ ನಿಂಗಪ್ಪ ತಮ್ಮ ಸ್ವಂತ ಜಮೀನನ್ನ ಗ್ರಾಮದ ಶಾಲೆಗೆ ನೀಡಿದ್ದಾರೆ. ಅಲ್ಪಸ್ವಲ್ಪ ಓದಿಕೊಂಡಿರುವ ಇವರು ಪ್ರೇಮ ವಿವಾಹ ಮಾಡಲು ಹೋಗಿ ಕೆಲವು ಅಡೆತಡೆಗಳನ್ನ ಎದುರಿಸಿದ್ದಾರಂತೆ. ಅಷ್ಟೇ ಅಲ್ಲ, ಇವರು ಇನ್ನೂ ಕೋರ್ಟ್, ಕಚೇರಿಗಳಿಗೆ ಅಲೆಯುತ್ತಾರಂತೆ.
ಎಷ್ಟೋ ಅಸಹಾಯಕ ಪ್ರೇಮಿಗಳು ದಿಕ್ಕು ತೋಚದಂತಾಗಿ ಅಲೆದಾಡುವ ಸಂಸರ್ಭದಲ್ಲಿ ನಿಂಗಪ್ಪನವರನ್ನು ಸಂಪರ್ಕಿಸಿ ತಮ್ಮ ಕಷ್ಟಗಳಿಂದ ಪಾರಾಗಿದ್ದಾರಂತೆ. ಆದ್ರೆ, ನಿಂಗಪ್ಪ ಮಾತ್ರ ಯಾರಿಗೂ ಸಹಾಯದ ಹಸ್ತ ಇಲ್ಲವೆಂದು ಹೇಳಿಲ್ಲ.
ತನ್ನ ಜೇಬಿನಲ್ಲಿದ್ದ ಹಣವನ್ನ ಸ್ವತ: ಖರ್ಚುಮಾಡಿ ಪ್ರೇಮಿಗಳನ್ನ ಒಂದಾಗಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಹೊರ ಜಿಲ್ಲೆಗಳಿಂದ ಬಂದು ನಿಂಗಪ್ಪರನ್ನು ಸಂಪರ್ಕಿಸಿ ಎಷ್ಟೋ ಜನ ಪ್ರೇಮಿಗಳು ಒಂದಾಗಿ ಹೋಗಿದ್ದಾರಂತೆ.