ಹಾವೇರಿ: ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ರುದ್ರಪ್ಪ ಲಮಾಣಿ ಅವರ ಪುತ್ರನನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದು, ಈ ಬಗ್ಗೆ ಶಾಸಕ ನೆಹರು ಓಲೇಕಾರ ಅವರು ರುದ್ರಪ್ಪ ಅವರ ಕುಟುಂಬದ ಮೇಲೆ ಮತ್ತಷ್ಟು ಆರೋಪಗಳನ್ನು ಹೊರೆಸಿದ್ದಾರೆ.
ನಗರದಲ್ಲಿ ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರುದ್ರಪ್ಪ ಲಮಾಣಿ ಅನೇಕ ಕ್ರಿಮಿನಲ್ ಕೆಲಸಗಳನ್ನ ಮಾಡಿದ್ದಾರೆ. ಈಗ ಅವರ ಮಗ ತಂದೆಯನ್ನ ಮೀರಿಸಿದ್ದಾನೆ. ಮಾಜಿ ಸಚಿವರ ಇತಿಹಾಸವೇ ಕ್ರಿಮಿನಲ್ ಹಿನ್ನೆಲೆ ಹೊಂದಿದೆ. ರುದ್ರಪ್ಪ ಲಮಾಣಿಯದ್ದು ಆಕಳ ಮುಖ ಕತ್ತಿ ಒದಿಕೆ ಎಂಬಂತಿದೆ. ರಾಜಕಾಲುವೆ ಒತ್ತುವರಿ, ಜಮೀನು ಕಬಳಿಕೆ ಸೇರಿದಂತೆ ಅವರ ಮೇಲೆ ಹಲವು ಆರೋಪಗಳಿವೆ ಎಂದು ಹೇಳಿದ್ದಾರೆ.
ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಆರೋಪಿಗಳಿಗೆ ಆಶ್ರಯ ನೀಡಿದ ಆರೋಪದ ಮೇಲೆ ಲಮಾಣಿ ಅವರ ಪುತ್ರನನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.