ಹಾವೇರಿ : ದಾವಣಗೆರೆಯ ಎಸ್ಎಸ್ ಮೆಡಿಕಲ್ ಕಾಲೇಜಿಗೆ ನವೀನ್ ಮೃತದೇಹ ನೀಡಲು ಕುಟುಂಬ ನಿರ್ಧರಿಸಿದೆ. ಈ ಮೂಲಕ ಮಗನ ಮುಖ ನೋಡುತ್ತೇವೋ ಇಲ್ಲವೋ ಎಂಬ ನೋವಿನಲ್ಲೇ ದಿನ ದೂಡುತ್ತಿದ್ದ ಕುಟುಂಬ ಈಗ ಮಹತ್ವದ ನಿರ್ಧಾರ ತೆಗೆದುಕೊಂಡಿದೆ.
ಈಟಿವಿ ಭಾರತದ ಜೊತೆ ಮೃತ ನವೀನ ತಂದೆ ಶೇಖರಗೌಡ ಈ ಬಗ್ಗೆ ಮಾಹಿತಿ ನೀಡಿದ್ದು, ಮಗನ ಪಾರ್ಥೀವ ಶರೀರ ಬರುವುದು ತಡವಾಗಿದ್ದಕ್ಕೆ ನಿರಾಶೆ ಆಗಿತ್ತು. ಮಗನ ಪಾರ್ಥೀವ ಶರೀರ ಬರುವ ವಿಚಾರ ಕೇಳಿದ ನಂತರ ನಿರಾಶೆ ದೂರವಾಗಿದೆ. ಮೃತದೇಹ ಸೋಮವಾರ ಚಳಗೇರಿಗೆ ಆಗಮಿಸಲಿದೆ. ಈ ವಿಷಯವನ್ನ ಭಾರತೀಯ ರಾಯಭಾರಿ ಕಚೇರಿಯವರು ತಿಳಿಸಿದ್ದಾರೆ ಎಂದ ಅವರು, ದಾವಣಗೆರೆಯ ಎಸ್ಎಸ್ ಮೆಡಿಕಲ್ ಕಾಲೇಜಿಗೆ ಮಗನ ಮೃತದೇಹ ನೀಡಲು ನಿರ್ಧರಿಸಿದ್ದೇವೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಸ್ಟಾಲಿನ್ ಸರ್ಕಾರದ ಬಜೆಟ್: ಶಿಕ್ಷಣ, ಪ್ರವಾಹ ತಡೆಗೆ ಆದ್ಯತೆ, ರೈತರ ಸಾಲ ಮನ್ನಾ ಘೋಷಣೆ
ಸೋಮವಾರ ಬೆಳಗ್ಗೆ ಚಳಗೇರಿ ಗ್ರಾಮದ ಮನೆಗೆ ಮೃತದೇಹ ಬರುವ ಮಾಹಿತಿ ದೊರೆತಿದೆ. ಇಪ್ಪತ್ತೊಂದು ದಿನಗಳ ನಂತರ ಮಗನ ಪಾರ್ಥೀವ ಶರೀರ ಬರಲಿದೆ. ಈ ಕಾರ್ಯಕ್ಕೆ ಶ್ರಮಪಟ್ಟ ಎಲ್ಲರಿಗೂ ಧನ್ಯವಾದಗಳು.
ಮಗನ ಪಾರ್ಥೀವ ಶರೀರ ಮನೆಗೆ ಬಂದ ನಂತರ ಮನೆಯಲ್ಲಿ ಪೂಜೆ ಸಲ್ಲಿಸಿ ಮೆಡಿಕಲ್ ಕಾಲೇಜಿಗೆ ಶರೀರ ಡೊನೇಟ್ ಮಾಡಲಾಗುವುದು. ಮೆಡಿಕಲ್ ವಿದ್ಯಾರ್ಥಿಗಳ ಅಧ್ಯಯನಕ್ಕೆ ಅನುಕೂಲ ಆಗಲೆಂದು ಈ ನಿರ್ಧಾರ ಮಾಡಲಾಗಿದೆ ಎಂದು ಭಾರವಾದ ಹೃದಯದಲ್ಲೇ ಮಾಹಿತಿ ಹಂಚಿಕೊಂಡಿದ್ದಾರೆ.
ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಚಳಗೇರಿ ಗ್ರಾಮದ ನವೀನ ಗ್ಯಾನಗೌಡರ ಉಕ್ರೇನ್ ಮತ್ತು ರಷ್ಯಾ ನಡುವಿನ ಯುದ್ಧದಲ್ಲಿ ಮೃತಪಟ್ಟಿದ್ದರು.ಇವರು ಖಾರ್ಕೀವ್ ನಲ್ಲಿ ನಾಲ್ಕನೆ ವರ್ಷದ ಎಂಬಿಬಿಎಸ್ ಅಭ್ಯಾಸ ಮಾಡುತ್ತಿದ್ದರು.
ಮರಳಿ ಮಣ್ಣಿಗೆ: ನವೀನ್ ತಾಯಿ
ಮಗನ ಮೃತದೇಹ ಬರುತ್ತದೆ ಎಂಬ ವಿಶ್ವಾಸ ಇತ್ತು. ಮಗನ ಮೃತದೇಹ ಬರುತ್ತಿರುವುದು ಸಮಾಧಾನ ತಂದಿದೆ ಎಂದು ನವೀನ್ ತಾಯಿ ವಿಜಯಲಕ್ಷ್ಮಿ ತಿಳಿಸಿದ್ದಾರೆ. ಮರಳಿ ಮಣ್ಣಿಗೆ ಎಂಬಂತೆ ಮಗನ ಮೃತದೇಹ ಮರಳಿ ಮನೆಗೆ ಬರುತ್ತಿದೆ. ಮಗನ ಮೃತದೇಹ ತರಲು ಶ್ರಮಿಸಿದ ಎಲ್ಲರಿಗೂ ಧನ್ಯವಾದ ಎಂದರು.