ಹಾವೇರಿ : ನಾಳೆ ಬೆಳಗ್ಗೆ 9 ಗಂಟೆಗೆ ಉಕ್ರೇನ್-ರಷ್ಯಾ ಯುದ್ಧದಲ್ಲಿ ಸಾವನ್ನಪ್ಪಿದ್ದ ನವೀನ ಅವರ ಪಾರ್ಥಿವ ಶರೀರ ಚಳಗೇರಿಗೆ ಆಗಮಿಸಲಿದೆ ಎಂದು ನವೀನ್ ತಂದೆ ಶೇಖರಗೌಡ ತಿಳಿಸಿದ್ದಾರೆ.
ಹಾವೇರಿ ಜಿಲ್ಲೆ ರಾಣೆಬೆನ್ನೂರಿನ ಚಳಗೇರಿಯ ನಿವಾಸದಲ್ಲಿ ಮಾತನಾಡಿದ ಅವರು, ಉಕ್ರೇನ್ ಮತ್ತು ರಷ್ಯಾ ನಡುವಿನ ಯುದ್ಧದಲ್ಲಿ ಮಗ ನವೀನ ಮಾರ್ಚ್ 1ರಂದು ಸಾವನ್ನಪ್ಪಿದ್ದ. ಸೋಮವಾರ ಬೆಳಗ್ಗೆ 9 ಗಂಟೆಗೆ ಅವನ ಮೃತದೇಹ ಮನೆಗೆ ಬರಲಿದೆ.
ಪಾರ್ಥಿವ ಶರೀರ ಬರಮಾಡಿಕೊಳ್ಳಲು, ಇಂದು ಸಂಜೆ ಸಹೋದರ ಹರ್ಷ ಹಾಗೂ 15 ಜನ ಬೆಂಗಳೂರಿಗೆ ಹೋಗಲಿದ್ದಾರೆ. ನಾಳೆ ಬೆಳಗ್ಗೆ 3 ಗಂಟೆಗೆ ಬೆಂಗಳೂರು ತಲುಪುವ ಮೃತದೇಹವನ್ನು ನಮ್ಮ ಗ್ರಾಮಕ್ಕೆ ತರುವ ಎಲ್ಲಾ ವ್ಯವಸ್ಥೆಯನ್ನು ಮುಖ್ಯಮಂತ್ರಿ, ಶಾಸಕರು ಮಾಡಿದ್ದಾರೆ ಎಂದು ಹೇಳಿದರು.
ಸಿರಿಗೆರೆ ಶ್ರೀಗಳು, ಸಿ.ಎಂ ಬಸವರಾಜ್ ಬೊಮ್ಮಾಯಿ, ಸಚಿವರಾದ ಬಿ.ಸಿ.ಪಾಟೀಲ್. ಶಿವರಾಮ್ ಹೆಬ್ಬಾರ್, ಸಂಸದ ಶಿವಕುಮಾರ್ ಉದಾಸಿ, ಶಾಸಕ ಅರುಣುಕುಮಾರ ಪೂಜಾರ ಸೇರಿದಂತೆ ಗಣ್ಯರು ಅಂತಿಮದರ್ಶನ ಪಡೆಯಲಿದ್ದಾರೆ ಎಂದರು.
ಮೃತದೇಹ ತಲುಪಿದ ಕೂಡಲೇ ನಮ್ಮ ವೀರಶೈವ ಲಿಂಗಾಯತ ಪದ್ಧತಿಯಂತೆ ಪೂಜೆ ಮಾಡಲಾಗುವುದು. ನಂತರ ಮನೆಯ ಮುಂದೆ ಸಾರ್ವಜನಿಕ ದರ್ಶನಕ್ಕೆ ಇಡಲಾಗುತ್ತದೆ. ಮೆಡಿಕಲ್ ವಿದ್ಯಾರ್ಥಿಗಳ ಅಧ್ಯಯನದ ಅನುಕೂಲತೆಗಾಗಿ ಮೆಡಿಕಲ್ ಕಾಲೇಜಿಗೆ ನವೀನ ಮೃತದೇಹ ದಾನ ಮಾಡುವ ನಿರ್ಧಾರ ಕೈಗೊಳ್ಳಲಾಗಿದೆ.
ಹಾಗಾಗಿ, ಮಧ್ಯಾಹ್ನ ಅಥವಾ ಸಂಜೆ ಹೊತ್ತಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಾರ್ವಜನಿಕ ಮೆರವಣಿಗೆ ಮಾಡಿ, ದಾವಣಗೆರೆಯ ಎಸ್ ಎಸ್ಮೆಡಿಕಲ್ ಕಾಲೇಜಿಗೆ ನವೀನ್ ಮೃತದೇಹವನ್ನು ಹಸ್ತಾಂತರ ಮಾಡಲಾಗುವುದು ಎಂದು ತಿಳಿಸಿದರು.