ಕೊರೊನಾ ಸೋಂಕಿತೆ ಸಾಹಿತಿಯ ಅಂತ್ಯಕ್ರಿಯೆಗೆ ಸ್ಥಳೀಯರ ವಿರೋಧ - ರಾಣೆಬೆನ್ನೂರು ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ ಸಾಹಿತಿ
ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನಲ್ಲಿ ಕೊರೊನಾ ಸೋಂಕಿಗೆ ಸಾಹಿತಿ ಬಲಿಯಾಗಿದ್ದು, ಮೃತದೇಹದ ಅಂತ್ಯಕ್ರಿಯೆ ಮಾಡಲು ಸ್ಥಳೀಯರು ವಿರೋಧ ವ್ಯಕ್ತಪಡಿಸಿದ ಘಟನೆ ನಡೆಯಿತು.

ಹಾವೇರಿ: ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ ಸಾಹಿತಿಯ ಅಂತ್ಯಕ್ರಿಯೆ ನೆರವೇರಿಸಲು ಸ್ಥಳೀಯರು ವಿರೋಧ ವ್ಯಕ್ತಪಡಿಸಿರುವ ಘಟನೆ ರಾಣೆಬೆನ್ನೂರು ತಾಲೂಕಿನ ಬಸಲಿಕಟ್ಟಿ ತಾಂಡದ ಬಳಿಯ ಮೇಡ್ಲೇರಿ ರಸ್ತೆ ಬಳಿ ನಡೆದಿದೆ.
ರಾಣೆಬೆನ್ನೂರು ನಗರದ ಮಹಿಳಾ ಸಾಹಿತಿ ಕೊರೊನಾ ಸೋಂಕಿಗೊಳಗಾಗಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದರು. ಇಂದು ಮೃತವ್ಯಕ್ತಿಯ ಅಂತ್ಯಕ್ರಿಯೆ ಮಾಡಲು ಜಿಲ್ಲಾಡಳಿತ ಮೆಡ್ಲೇರಿ ರಸ್ತೆಯ ಸರ್ಕಾರಿ ಜಮೀನಿನಲ್ಲಿ ವ್ಯವಸ್ಥೆ ಮಾಡಿತ್ತು. ಆದರೆ ಈ ಸ್ಥಳದಲ್ಲಿ ಅಂತ್ಯಕ್ರಿಯೆ ಮಾಡಬಾರದು ಎಂದು ರಸ್ತೆಯ ಪಕ್ಕದಲ್ಲಿರುವ ಗಂಗಾಜಲ ತಾಂಡಾ, ಬಸಲೀಕಟ್ಟಿ ತಾಂಡಾ, ಗೋಂವಿಂದ ಬಡಾವಣೆಯ ಸ್ಥಳೀಯರ ವಿರೋಧ ವ್ಯಕ್ತಪಡಿಸಿದರು.
ಸ್ಥಳೀಯರು ಅಂತ್ಯಕ್ರಿಯೆಗೆ ವಿರೋಧ ಮಾಡಿದ ಕಾರಣ ಒಂದು ಗಂಟೆಗೂ ಹೆಚ್ಚು ಕಾಲ ಮೃತದೇಹವನ್ನು ಆ್ಯಂಬುಲೆನ್ಸ್ ವಾಹನದಲ್ಲೇ ಇರಿಸಲಾಗಿತ್ತು. ನಂತರ ಆರೋಗ್ಯ ಇಲಾಖೆ ಸಿಬ್ಬಂದಿ ಮತ್ತು ಪೊಲೀಸ್ ಬಂದೋಬಸ್ತ್ನೊಂದಿಗೆ ವೀರಶೈವ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ಮಾಡಲಾಯಿತು.