ಹಾವೇರಿ: ಜಿಲ್ಲೆಯ ರಾಣೆಬೆನ್ನೂರು ನಗರದಲ್ಲಿ ಶ್ರೀಬೀರಲಿಂಗೇಶ್ವರ ವ್ಯಾಯಾಮ ಶಾಲೆಯಲ್ಲಿ ಯುಗಾದಿ ಹಬ್ಬದ ಪ್ರಯುಕ್ತ ಮತ್ತು ನೂತನ ವ್ಯಾಯಾಮ ಶಾಲೆ ಉದ್ಘಾಟನೆ ಹಿನ್ನೆಲೆಯಲ್ಲಿ ನಗರಸಭೆ ಕ್ರೀಡಾಂಗಣದಲ್ಲಿ ರಾಷ್ಟ್ರಮಟ್ಟದ ಕಾಟಾ ನಿಖಾಲಿ ಕುಸ್ತಿ ಪಂದ್ಯಾವಳಿಯನ್ನು ಆಯೋಜಿಸಲಾಗಿತ್ತು. ವಿವಿಧ ಪಟ್ಟುಗಳನ್ನ ಪ್ರದರ್ಶಿಸುವ ಮೂಲಕ ಕುಸ್ತಿಪಟುಗಳು ಎದುರಾಳಿಗಳಿಗೆ ಅಖಾಡದಲ್ಲಿ ಸವಾಲು ಹಾಕಿದರು.
ದೇಶದ ಮೂಲೆ ಮೂಲೆಯಿಂದ ಆಗಮಿಸಿದ್ದ ಕುಸ್ತಿಪಟುಗಳನ್ನು ತಲೆಗೆ ಕೇಸರಿ ಮತ್ತು ಹಳದಿ ರುಮಾಲು ಸುತ್ತಿ ಬಾಜಾ ಭಜಂತ್ರಿಯೊಂದಿಗೆ ಕ್ರೀಡಾಂಗಣಕ್ಕೆ ಸ್ವಾಗತಿಸಲಾಯಿತು. ಕುಸ್ತಿ ಪಂದ್ಯಾವಳಿಗೆ ದೂರದ ಪಂಜಾಬ್, ಕೊಲ್ಲಾಪುರ ಬೆಳಗಾವಿ ಸೇರಿದಂತೆ ರಾಜ್ಯದ ವಿವಿಧ ಮೂಲೆಗಳಿಂದ ಪೈಲ್ವಾನರು ಆಗಮಿಸಿದ್ದರು. ಕುಸ್ತಿ ಪಂದ್ಯಾವಳಿಗಾಗಿ ನಿರ್ಮಿಸಲಾಗಿದ್ದ ಕಣದಲ್ಲಿ ಜಟ್ಟಿಗಳು ದೂಳೆಬ್ಬಿಸಿದರು.
ಪ್ರಸ್ತುತ ಆಧುನಿಕತೆಯ ಕಾಲದಲ್ಲಿ ವ್ಯಾಯಾಮ ಶಾಲೆ, ಗರಡಿ ಮನೆಗಳು ಮಾಯವಾಗುತ್ತಿವೆ. ಯುವಕರು ಮೊಬೈಲ್ ಸೇರಿದಂತೆ ಆನ್ಲೈನ್ ಗೇಮ್ಗಳಲ್ಲಿ ಬ್ಯುಸಿಯಾಗಿದ್ದಾರೆ. ಕಟ್ಟುಮಸ್ತಾದ ದೇಹ ಮತ್ತು ಆರೋಗ್ಯಯುತ ಜೀವನಕ್ಕೆ ಕುಸ್ತಿ ಸಹಕಾರಿಯಾಗಿದೆ. ಈ ಹಿನ್ನೆಲೆಯಲ್ಲಿ ಯುವಕರು ಕುಸ್ತಿಯತ್ತ ಆಕರ್ಷಿತರಾಗಲು ಈ ಪಂದ್ಯಾವಳಿಯನ್ನು ಆಯೋಜಿಸಿರುವುದಾಗಿ ಕುಸ್ತಿ ಪಂದ್ಯದ ಆಯೋಜಕ ಭರಮಪ್ಪ ತಿಳಿಸಿದರು.
ಈ ಪಂದ್ಯಾವಳಿಯಲ್ಲಿ 34 ಜೋಡಿ ಕಾಟಾ ನಿಖಾಲಿ ಕುಸ್ತಿ ಆಯೋಜಿಸಲಾಗಿತ್ತು. ಈ ಕುಸ್ತಿ ಪಂದ್ಯಾವಳಿ ನೋಡಲು ರಾಣೆಬೆನ್ನೂರು ಸೇರಿದಂತೆ ಜಿಲ್ಲೆಯ ವಿವಿಧೆಡೆಯಿಂದ ಸಾವಿರಾರು ಕ್ರೀಡಾಪ್ರೇಮಿಗಳು ಆಗಮಿಸಿದ್ದರು. ಗೆದ್ದ ಕ್ರೀಡಾಪಟುಗಳಿಗೆ ಬಹುಮಾನ ನೀಡಿ ಗೌರವಿಸಲಾಯಿತು.
ಇದನ್ನೂ ಓದಿ: ಹಿಂದೂ-ಮುಸ್ಲಿಂರು ಒಡಗೂಡಿ ಮೀನು ಹಿಡಿದ್ರು.. ಪರ್ಯಾಯವಾಗಿ ದೇವಸ್ಥಾನಕ್ಕೆ ಕಾಣಿಕೆ ಕೊಟ್ರು..