ರಾಣೆಬೆನ್ನೂರು: ಹಿರಿಯ ಸಾಹಿತಿ, ನಾಡೋಜ ಪಾಟೀಲ್ ಪುಟ್ಟಪ್ಪ ವಿಧಿವಶರಾಗಿದ್ದು, ನಾಡಿನಾದ್ಯಂತ ಗಣ್ಯರು ಸಂತಾಪ ಸೂಚಿಸುತ್ತಿದ್ದಾರೆ. ಇನ್ನು ಪಾಪು ಅವರು ಅಮೆರಿಕದಲ್ಲಿ ಶಿಕ್ಷಣ ಪೂರೈಸಿದ ನಂತರ ಸ್ವಗ್ರಾಮ ಹಲಗೇರಿಯಲ್ಲಿ ಮಹಿಳೆಯರಿಗೆ ರಾತ್ರಿ ಸಮಯದಲ್ಲಿ ಇಂಗ್ಲಿಷ್ ಪಾಠ ಹೇಳಿಕೊಡುತ್ತಿದ್ದರು ಎಂದು ವಿಶಾಲಾಕ್ಷಿ ಹಿರೇಮಠ ಹಳೆಯ ನೆನಪು ಮೆಲಕು ಹಾಕಿದರು.
1949ರಲ್ಲಿ ಅಮೆರಿಕದ ಕ್ಯಾಲಿಫೋರ್ನಿಯಾಕ್ಕೆ ಪತ್ರಿಕೋದ್ಯಮ ಕಲಿಯಲು ತೆರಳುವಾಗ ಹಣಕಾಸಿನ ಅಡಚಣೆಯಾದ ಸಮಯದಲ್ಲಿ ವಿಶಾಲಾಕ್ಷಿಯವರ ತಾಯಿ ಹತ್ತು ತೊಲೆ ಬಂಗಾರ ಕೊಟ್ಟಿದ್ದರು. ಅಂದಿನ ಕಾಲದಲ್ಲಿ ಮಹಿಳೆಯರು ಶಿಕ್ಷಣ ಪಡೆಯುವುದು ಅಪರೂಪವಾಗಿತ್ತು. ಅಲ್ಲದೇ ಹಲಗೇರಿ ಗ್ರಾಮದಲ್ಲಿ ಯಾವುದೇ ಶಾಲೆಗಳಿರಲಿಲ್ಲ. ಆದ್ದರಿಂದ ವಿದೇಶದಲ್ಲಿ ವಿದ್ಯಾಭ್ಯಾಸ ಮಾಡಿ ಬಂದ ನಂತರ ಮಹಿಳೆಯರಿಗೆ ಇಂಗ್ಲಿಷ್ ಪಾಠ ಹೇಳಿ ಕೊಡುತ್ತಿದ್ದರು ಎಂದು ನೆನಪು ಮಾಡಿಕೊಂಡರು.