ರಾಣೆಬೆನ್ನೂರು: ನಗರಸಭಾ ವಿಶೇಷ ಅನುದಾನದಲ್ಲಿ ಸುಮಾರು 36 ಹೊಸ ಮಳಿಗೆಗಳನ್ನು ನಿರ್ಮಿಸಲಾಗಿದೆ. ಆದರೆ ರಾಜಕೀಯ ಮೇಲಾಟದಿಂದ ಮಳಿಗೆಗಳ ಹರಾಜು ನಡೆಯದೆ ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿವೆ.
ಮಾರುಕಟ್ಟೆ ಮಧ್ಯ ಭಾಗದಲ್ಲಿ ನಿರ್ಮಾಣವಾಗಿರುವ ಮಳಿಗೆಗಳು ಸುಮಾರು 2 ವರ್ಷದಿಂದ ಖಾಲಿ ಬಿದ್ದಿದ್ದು, ಇಲ್ಲಿನ ಹಣ್ಣು ಮತ್ತು ಹೂವಿನ ವ್ಯಾಪರಿಗಳು ಕೊಳೆತ ಹಣ್ಣುಗಳನ್ನು ಹಾಗೂ ಕಸವನ್ನು ಈ ಮಳಿಗೆ ಒಳಗಡೆ ಬಿಸಾಡುತ್ತಿದ್ದಾರೆ. ಅಲ್ಲದೆ ಮಳಿಗೆಗಳ ಒಂದನೇ ಮಹಡಿಗೆ ಹೋಗುವ ಸ್ಥಳದಲ್ಲಿ ಮಲ, ಮೂತ್ರ ಮಾಡಿರುವುದರಿಂದ ಇಲ್ಲಿನ ವಾತಾವರಣ ಹದಗೆಟ್ಟಿದೆ. ಕೋಟ್ಯಂತರ ರೂ. ಖರ್ಚು ಮಾಡಿ ಕಟ್ಟಿಸಿರುವ ಮಳಿಗೆಗಳನ್ನು ಸದ್ಯ ಕಿಡಿಗೇಡಿಗಳು ಶೌಚಾಲಯವನ್ನಾಗಿ ಮಾಡಿಕೊಂಡಿದ್ದಾರೆ. ನಗರಸಭೆ ಅಧಿಕಾರಿಗಳು ಈ ಮಳಿಗೆಗಳ ಬಗ್ಗೆ ಗಮನ ಹರಿಸದ ಕಾರಣ ಇಂತಹ ಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ಅಧಿಕಾರಿಗಳು ಬೇಗನೆ ಈ ಮಳಿಗೆಗಳನ್ನು ಹರಾಜು ಮಾಡುವ ಮೂಲಕ ಸರ್ಕಾರಿ ಸ್ವತ್ತನ್ನು ಕಾಪಾಡಬೇಕು ಎನ್ನುತ್ತಾರೆ ನಗರಸಭೆ ಸದಸ್ಯ ಮಲ್ಲಿಕಾರ್ಜುನ ಅಂಗಡಿ.
ಇನ್ನು ಹಳೇ ಬಾಡಿಗೆದಾರರು ನಗರಸಭೆ ಕೌನ್ಸಿಲ್ ನಿರ್ಣಯದಂತೆ ನಮಗೆ ಮಳಿಗೆಗಳನ್ನು ಮತ್ತೆ ನೀಡಬೇಕು ಎಂದು ಸಚಿವರಿಗೆ ಮನವಿ ಮಾಡಿದ್ದರು. ಆದರೆ ಕೆಲವರು ಹೊಸದಾಗಿ ಟೆಂಡರ್ ಮಾಡಬೇಕು ಎಂದು ಒತ್ತಾಯಿಸಿದ್ದರು. ಈ ತಿಕ್ಕಾಟದ ನಡುವೆ ನಗರಸಭೆ ಕಾರ್ಯಾಲಯ ಹೊಸದಾಗಿ 36 ಮಳಿಗೆಗಳನ್ನು ನಿರ್ಮಿಸಿ ಫೆ. 2, 2019ರಂದು ಮಳಿಗೆಗಳ ಹರಾಜು ಪ್ರಕ್ರಿಯೆಗೆ ಟೆಂಡರ್ ಕರೆಯಲಾಗಿತ್ತು. ಆದರೆ ದಿಢೀರನೆ ಅಂದಿನ ಪೌರಾಡಳಿತ ಸಚಿವರು ಮಳಿಗೆಗಳ ಹರಾಜು ತಡೆಯುವಂತೆ ಪೌರಾಡಳಿತ ಕಾರ್ಯದರ್ಶಿಗೆ ಸೂಚಿಸಿದ್ದು ಇದಕ್ಕೆ ಪ್ರಮುಖ ಕಾರಣವಾಗಿದೆ ಎನ್ನಲಾಗುತ್ತಿದೆ.