ಹಾವೇರಿ : ಸೂರ್ಯ ಚಂದ್ರರು ಇರುವುದು ಎಷ್ಟು ಸತ್ಯವೋ, ಉಪಚುನಾವಣೆ ನಡೆಯುವ ಎರಡು ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲುವುದು ಅಷ್ಟೇ ಸತ್ಯ ಎಂದು ಸಂಸದ ಬಿ.ವೈ.ರಾಘವೇಂದ್ರ ಅಭಿಪ್ರಾಯಪಟ್ಟಿದ್ದಾರೆ.
ಹಾನಗಲ್ ತಾಲೂಕಿನ ಕಲಗುಡ್ಡಿ ಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿ ಶಿವರಾಜ್ ಸಜ್ಜನ್ ಪರ ಪ್ರಚಾರ ನಡೆಸಿ ಮಾತನಾಡಿದ ಅವರು, ಬಿಜೆಪಿಯ ಶಿವರಾಜ್ ಸಜ್ಜನ್ 25 ಸಾವಿರಕ್ಕೂ ಅಧಿಕ ಮತಗಳಿಂದ ಜಯಭೇರಿ ಬಾರಿಸಲಿದ್ದಾರೆ. ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾಡಿದ ಕಾರ್ಯಕ್ರಮಗಳು, ರಾಜ್ಯದಲ್ಲಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ನೀಡಿದ ಯೋಜನೆಗಳು ಮನೆ ಮನೆ ಮುಟ್ಟಿವೆ. ದಿವಂಗತ ಉದಾಸಿ ಶಾಸಕರಾಗಿದ್ದಾಗ ನೀಡಿದ ಕಾರ್ಯಗಳು ಗೆಲುವಿಗೆ ಸಹಕಾರಿಯಾಗಲಿವೆ ಎಂದರು.
ಸಿಎಂ ಯಡಿಯೂರಪ್ಪ ರಾಜೀನಾಮೆ ನೀಡುವಾಗ ಶಿಕಾರಿಪುರದ ಜನರನ್ನ ನೆನೆದುಕೊಂಡು ಭಾವನಾತ್ಮಕವಾಗಿ ಕಣ್ಣೀರು ಹಾಕಿದ್ದರು ಹೊರತು, ಸಿಎಂ ಸ್ಥಾನಕ್ಕೆ ಕಣ್ಣೀರು ಹಾಕಿರಲಿಲ್ಲ. ಯಡಿಯೂರಪ್ಪ ಬಗ್ಗೆ ಪ್ರತಿಪಕ್ಷದವರು ಬಹಳ ಪ್ರೀತಿ ತೋರಿಸುತ್ತಿದ್ದಾರೆ ಅವರಿಗೆ ಕೃತಜ್ಞತೆ ಸಲ್ಲಿಸುತ್ತೆನೆ ಎಂದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದಂತೆ ಸಚಿವ ಸ್ಥಾನ ಸಿಗದೇ ಕೊರಗಿ ಕೊರಗಿ ಸಿ.ಎಂ. ಉದಾಸಿ ಅವರು ಸಾವನ್ನಪ್ಪಿಲ್ಲ. ಅವರ ಆರೋಗ್ಯ ಸರಿ ಇಲ್ಲದ ಕಾರಣ ಪಕ್ಷ ಅವರಿಗೆ ಮಾನಸಿಕ ಮತ್ತು ದೈಹಿಕ ಕೆಲಸ ಕೊಡಬಾರದು, ಅವರು ಆರೋಗ್ಯವಾಗಿರಲಿ ಎಂದು ಸಚಿವ ಸ್ಥಾನ ನೀಡಿರಲಿಲ್ಲ ಎಂದು ಬಿ.ವೈ. ರಾಘವೇಂದ್ರ ತಿಳಿಸಿದರು.
ದಿವಂಗತ ಉದಾಸಿ ಮತ್ತು ಯಡಿಯೂರಪ್ಪ ನಡುವೆ ಉತ್ತಮ ಸಂಬಂಧ ಇತ್ತು. ಪ್ರತಿಪಕ್ಷದವರಿಗೆ ಹೇಳಿಕೊಳ್ಳಲು ಬೇರೆ ವಿಷಯವಿಲ್ಲ. ಬಿಜೆಪಿ ಯಡಿಯೂರಪ್ಪರನ್ನ ನಾಲ್ಕು ಬಾರಿ ಮುಖ್ಯಮಂತ್ರಿ ಮಾಡಿದೆ, ನನ್ನನ್ನ ಮೂರು ಬಾರಿ ಸಂಸದರನ್ನಾಗಿ ಮಾಡಿದೆ. ಬಿ. ವೈ. ವಿಜಯೇಂದ್ರನಿಗೆ ರಾಜ್ಯ ಉಪಾಧ್ಯಕ್ಷ ಸ್ಥಾನ ನೀಡಿದೆ. ಪಕ್ಷ ನಮ್ಮನ್ನ ಎಂದು ಚಿವುಟುವ ಕೆಲಸ ಮಾಡಿಲ್ಲ ಎಂದು ಸಂಸದ ರಾಘವೇಂದ್ರ ಸ್ಪಷ್ಟಪಡಿಸಿದರು.