ಹಾವೇರಿ : ''ಬಿಡುಗಡೆಯಾಗಬೇಕಾದ ಬಿಲ್ಗಳಿಗೂ ಕಮಿಷನ್ ಕೇಳೋದು ಶುರುವಾಗಿದೆ'' ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ರಾಜ್ಯ ಸರ್ಕಾರದ ವಿರುದ್ಧ ಆರೋಪ ಮಾಡಿದ್ದಾರೆ.
ಜಿಲ್ಲೆ ಶಿಗ್ಗಾಂವಿಯಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಗುತ್ತಿಗೆದಾರದಿಂದ ಕಮಿಷನ್ ಆರೋಪಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದರು. ''ಬಿಜೆಪಿ ಸರ್ಕಾರ ಕಳೆದ ಮೂರು ವರ್ಷಗಳಿಂದ ಗುತ್ತಿಗೆದಾರರಿಗೆ ಯಾವುದೇ ಬಿಲ್ ಅನ್ನು ಬಿಡುಗಡೆ ಮಾಡಿಲ್ಲ ಎಂದು ನಿನ್ನೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪ ಮಾಡಿದ್ದಾರೆ. ನಮ್ಮ ಸರ್ಕಾರವು ಅಧಿಕಾರದಲ್ಲಿ ಇದ್ದಾಗ, ಹಣ ಬಿಡುಗಡೆ ಮಾಡಿದ್ದೇವೆ.
ಸರ್ಕಾರಿಂದ ಮಂಜೂರಾದ ಕಾಮಗಾರಿಗೆ 6,500 ಕೋಟಿ ಹಣವನ್ನು ಕೊಟ್ಟಿದ್ದೇವೆ. ಕಳೆದ ಜನವರಿಯಲ್ಲಿ 600 ಕೋಟಿ ರೂಪಾಯಿಗಿಂತ ಹೆಚ್ಚು ಹಣ ನೀಡಿದ್ದೇವೆ. ಫೆಬ್ರುವರಿ, ಮಾರ್ಚ್, ಏಪ್ರಿಲ್ನಲ್ಲಿ 657 ಕೋಟಿ ರೂ. ಬಿಡುಗಡೆ ಮಾಡಿದ್ದೇವೆ. ಮೇ 6 ರಂದು ಬಿಬಿಎಂಪಿ ಅಕೌಂಟ್ಗೆ ಹಣ ಜಮಾ ಆಗಿತ್ತು. ಅವಾಗ ಸಿದ್ದರಾಮಯ್ಯ ಸಿಎಂ ಆಗಿರಲಿಲ್ಲ. ಕಾಂಗ್ರೆಸ್ ಸರ್ಕಾರವೂ ಇರಲಿಲ್ಲ'' ಎಂದು ಬಸವರಾಜ ಬೊಮ್ಮಾಯಿ ಕಿಡಿಕಾರಿದರು.
''ಯಾರೆಲ್ಲ ಗುತ್ತಿಗೆದಾರರು ಕೆಲಸ ಮಾಡಿದ್ದಾರೆ ಅವರಿಗೆ ಹಣ ಕೊಡಬೇಕು. ತನಿಖೆ ನೆಪದಲ್ಲಿ ಎಲ್ಲ ಕಾಮಗಾರಿ ನಿಲ್ಲಿಸುವಂತಹದ್ದು ಎಷ್ಟರ ಮಟ್ಟಿಗೆ ಸರಿ. ಹೀಗಾಗಿ ನಮಗೆ ಅನಿಸ್ತಾ ಇದೆ ಇದರಲ್ಲೇನೋ ಅವ್ಯವಹಾರ ನಡೆದಿದೆ ಅನ್ನಿಸುತ್ತದೆ. ಈ ಕಾಂಗ್ರೆಸ್ ಸರ್ಕಾರ ಸುಮ್ಮನೆ ತನಿಖೆ ಮಾಡ್ತಾ ಇದ್ದೇವೆ ಎಂದು ಹೇಳಲಾಗುತ್ತಿದೆ. ಪಾರದರ್ಶಕತೆಯ ಕೊರತೆ ಎದ್ದು ಕಾಣುತ್ತಿದೆ. ಸತ್ಯ ಏನಿದಿಯೋ ಹೊರಗೆ ಬರಬೇಕು'' ಎಂದು ಆಗ್ರಹಿಸಿದರು.
''ಕಾಂಗ್ರೆಸ್ನ ಕೇಂದ್ರ ನಾಯಕ ರಾಹುಲ್ ಗಾಂಧಿ ಜೀರೊ ಪರ್ಸೆಂಟ್ ಅಧಿಕಾರ ಕೊಡ್ತೇವಿ ಅಂತಾ ಹೇಳಿದ್ದರು. ಆದರೆ, ಈ ಇಲ್ಲಿ ಕಮಿಷನ್ ಪಡೆಯುವ ಪ್ರವೃತ್ತಿಯನ್ನು ಮುಂದುವರಿಸಲಾಗುತ್ತಿದೆ. ಇದರ ವಿರುದ್ಧ ಕೇಂದ್ರದ ನಾಯಕರು ತನಿಖೆ ಮಾಡಬೇಕು. ಇಲ್ಲವಾದರೆ, ಕೆಂದ್ರದ ವರಿಷ್ಠರು ಕೂಡಾ ಭಾಗಿಯಾಗಿದ್ದಾರೆ ಅಂತಾ ಸಂಶಯ ಮೂಡುತ್ತಿದೆ'' ಎಂದರು.
ಇದು ರೈತ ವಿರೋಧಿ ಸರ್ಕಾರ: ಬಿಜೆಪಿ ಸರ್ಕಾರದ ರೈತ ಪರವಾದ ಯೋಜನೆಗಳಿಗೆ ಕಾಂಗ್ರೆಸ್ ಬ್ರೇಕ್ ಹಾಕಿದ ವಿಚಾರದ ಕುರಿತಂತೆ ಪ್ರತಿಕ್ರಿಯಿಸಿದ ಮಾಜಿ ಸಿಎಂ ಬೊಮ್ಮಾಯಿ, ''ಇದು ರೈತ ವಿರೋಧಿ ಸರ್ಕಾರವಾಗಿದೆ. ರೈತರ ವಿದ್ಯಾ ನಿಧಿ ನಿಲ್ಲಿಸಿದ್ದಾರೆ. ರೈತರ ಬದುಕಿಗೆ ಉಪಯೋಗ ಆಗುವ ರೈತರ ಆವರ್ತ ನಿಧಿ ಕೂಡಾ ಬಂದ್ ಮಾಡಿದ್ದಾರೆ. ರೈತರಿಗೆ ಸಹಾಯ ಆಗುವ ಬುಹುತೇಕ ಯೋಜನೆಗಳನ್ನು ನಿಲ್ಲಿಸಿದ್ದಾರೆ. ನಾವು ಇದರ ವಿರುದ್ಧ ಮುಂದೆ ಹೋರಾಟ ಮಾಡ್ತೇವಿ'' ಎಂದು ಬಸವರಾಜ ಬೊಮ್ಮಾಯಿ ಎಚ್ಚರಿಕೆ ನೀಡಿದರು.
ಇದನ್ನೂ ಓದಿ: ಬಿಜೆಪಿ ಪ್ರಾಯೋಜಿತ ಗುತ್ತಿಗೆದಾರಿಂದ ಮಾತ್ರ ಕಮಿಷನ್ ಆರೋಪ: ಡಿಸಿಎಂ ಡಿ ಕೆ ಶಿವಕುಮಾರ್