ಹಾವೇರಿ: ಹಾನಗಲ್ ಮತ್ತು ಸಿಂದಗಿ ಕ್ಷೇತ್ರಗಳ ಬೈ ಎಲೆಕ್ಷನ್ ಪ್ರಚಾರ ಅಬ್ಬರ ದಿನದಿಂದ ದಿನಕ್ಕೆ ಕಾವು ಪಡೆಯುತ್ತಲೇ ಇದೆ. ಈ ನಡುವೆ, ಆರೋಪ- ಪ್ರತ್ಯಾರೋಪ, ಟೀಕೆ-ಟಿಪ್ಪಣಿ ರಾಜಕಾರಣಿಗಳಿಂದ ಹೊರಹೊಮ್ಮುತ್ತಲೇ ಇವೆ. ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೇಳಿಕೆಗೆ ಶಾಸಕ ರಾಜುಗೌಡ ತಿರುಗೇಟು ನೀಡಿದ್ದಾರೆ.
ಹಾನಗಲ್ ತಾಲೂಕಿನ ಗಡಿಯಂಕನಹಳ್ಳಿಯ ಫಾರಂ ಹೌಸ್ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಡಿ ಕೆ ಶಿವಕುಮಾರ್ ಅವರು ಏನು ಕೆಲಸ ಮಾಡಿದ್ದಾರೋ ಅದನ್ನು ನೆನಪಿಸಿಕೊಂಡು ಮಾತನಾಡುತ್ತಾರೆ. ಅವರು ಸಚಿವರಾಗಿದ್ದ ಸಮಯದಲ್ಲಿ ಗೋಣಿ ಚೀಲದಲ್ಲಿ ದುಡ್ಡು ತೆಗೆದುಕೊಂಡು ಹೋಗಿ ಎಲೆಕ್ಷನ್ ಮಾಡಿದ್ದಾರೆ. ಅದನ್ನೇ ಹೇಳುತ್ತಿದ್ದಾರೆ. ಡಿಕೆಶಿಯವರು ಯಾವತ್ತಾದರೂ ಬೂತ್ ಕಮಿಟಿ ಸಭೆ ಮಾಡಿದ್ದಾರಾ, ಎಲ್ಲಾ ಸಮುದಾಯದವರನ್ನು ಕರೆದು ಮಾನಾಡಿದ್ದಾರಾ ಎಂದು ಪ್ರಶ್ನಿಸಿದರು.
ಡಿಕೆಶಿಯವರು ಹುಚ್ಚಾಸ್ಪತ್ರೆಗೆ ಹೋದಾಗ ನಾವು ಹೋಗಿ ಹಣ್ಣು-ಹಂಪಲು ಕೊಟ್ಟು ಬರುತ್ತೇವೆ. ಎದುರಾಳಿಗಳು ನಮಗೆ ಬೇಕು. ಇದೇ ವೇಳೆ ಅವರು ಹುಚ್ಚಾಸ್ಪತ್ರೆಗೆ ಸೇರಿದರೆ ಉಚಿತವಾಗಿ ಚಿಕಿತ್ಸೆಯ ಖರ್ಚು ವೆಚ್ಚವವನ್ನು ಸರ್ಕಾರವೇ ಭರಿಸುವಂತೆ ಸಿಎಂ ಬೊಮ್ಮಾಯಿಯವರಿಗೆ ಕೇಳಿಕೊಳ್ಳುತ್ತೇವೆ ಎಂದರು.
ಶಿವಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷರಾದಾಗಿನಿಂದ ಎಲ್ಲಾ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲುತ್ತಾ ಬಂದಿದೆ. ಇಷ್ಟಾದ ಮೇಲೆ ಅವರು ಎಲ್ಲಿಗೆ ಹೋಗಬೇಕು ಹೇಳಿ, ಅವರಿಗೆ ಎಲ್ಲಾ ರೀತಿಯ ಆರೈಕೆ ಮಾಡುತ್ತೇವೆ ಎಂದು ರಾಜುಗೌಡ ವ್ಯಂಗ್ಯವಾಡಿದರು.