ಹಾವೇರಿ : ಮಾಜಿ ಮುಖ್ಯಮಂತ್ರಿಗಳಂತೆ ಸಿಎಂ ಬಸವರಾಜ ಬೊಮ್ಮಾಯಿ ಅವರು ನಮ್ಮ ಸಮಾಜಕ್ಕೆ ಮೋಸ ಮಾಡುವುದಿಲ್ಲ. ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿಯನ್ನು ನೀಡುತ್ತಾರೆ ಎಂಬ ಭರವಸೆ ಇದೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು.
ಜಿಲ್ಲೆಯ ಹಾನಗಲ್ ಪಟ್ಟಣದಲ್ಲಿ ಮಾತನಾಡಿದ ಅವರು, ಸೆಪ್ಟೆಂಬರ್ 15ಕ್ಕೆ ಆರು ತಿಂಗಳ ಗಡುವು ಮುಗಿಯುತ್ತಿದೆ. ಕೂಡಲಸಂಗಮ ಸ್ವಾಮೀಜಿಗಳ ನೇತೃತ್ವದಲ್ಲಿ ರಾಜ್ಯದಲ್ಲಿ ಸಮುದಾಯದ ಶಕ್ತಿ ಒಗ್ಗೂಡಿಸಲು ಪ್ರಯತ್ನ ಮಾಡಲಾಗುತ್ತಿದೆ. ನಾವೆಲ್ಲರೂ ಸ್ವಾಮೀಜಿಗಳ ಬೆಂಬಲಕ್ಕೆ ನಿಂತುಕೊಂಡಿದ್ದೇವೆ. ನಾವು ರಾಜಕೀಯ ಮೀಸಲಾತಿ ಕೇಳ್ತಿಲ್ಲ, ಶೈಕ್ಷಣಿಕ ಮೀಸಲಾತಿ ಕೇಳ್ತಿದ್ದೇವೆ ಎಂದರು.
ಮೋಸ ಮಾಡಿದವರು ಯಾರು ಅಂತಾ ಗೊತ್ತಿದೆ : ನಮ್ಮ ಸಮಾಜಕ್ಕೆ ಯಾರ್ಯಾರು ಮೋಸ ಮಾಡಿದ್ದಾರೆ ಅನ್ನೋದು ಜನರಿಗೆ ಗೊತ್ತಿದೆ. ಸಮಾಜ ಒಡೆಯಬೇಕು ಅಂತಾ ಕೆಲವರು ರಾಜ್ಯದಲ್ಲಿ ಪಿತೂರಿ ನಡೆಸ್ತಿದ್ದಾರೆ. ಎರಡು, ಮೂರು ಪೀಠ ಮಾಡ್ಕೊಂಡು ಕೆಲವರು ಪಂಚಮಸಾಲಿ ಸಮಾಜವನ್ನ ದುರುಪಯೋಗ ಮಾಡಿಕೊಂಡಿದ್ದಾರೆ. ನಮ್ಮಲ್ಲೇ ಕೆಲವರು ಮಂತ್ರಿ, ಮುಖ್ಯಮಂತ್ರಿ ಆಗಬೇಕು ಅಂತಾ ಸಮಾಜ ಒಡೆಯೋ ಕೆಲಸ ಮಾಡ್ತಿದ್ದಾರೆ. ನಾನು ಮಂತ್ರಿ, ಮುಖ್ಯಮಂತ್ರಿ ಆಗಬೇಕು ಅಂತಾ ಹೋರಾಟ ಮಾಡ್ತಿಲ್ಲ ಎಂದರು.
ಸಮುದಾಯ ಒಡೆಯುವ ಕುತಂತ್ರ ನಡೆಯಲ್ಲ : ಪಂಚಮಸಾಲಿ ಪ್ರತಿಜ್ಞಾ ಪಂಚಾಯತ್ ಅಭಿಯಾನ ಬಹಳ ದೊಡ್ಡ ಪರಿಣಾಮ ಆಗುತ್ತದೆ. ಹಿಂದಿನ ಇಬ್ಬರು ಮುಖ್ಯಮಂತ್ರಿಗಳು ನಮ್ಮ ಸಮಾಜವನ್ನ 2ಎಗೆ ಸೇರಿಸಬಹುದಿತ್ತು. ಆದರೆ, ಸೇರಿಸಲಿಲ್ಲ. ಸಿ ಎಂ ಉದಾಸಿ ನೇತೃತ್ವದ ಸಮಿತಿ ಪಂಚಮಸಾಲಿ ಸಮಾಜವನ್ನ 2ಎಗೆ ಸೇರಿಸಬಹುದು ಅಂತಾ ವರದಿ ಕೊಟ್ಟಿದೆ. ಒಂದು, ಎರಡು ಫರ್ಸೆಂಟ್ ಇದ್ದ ಸಮಾಜದ ನಾಯಕರು ದೆಹಲಿಯಲ್ಲಿ ನಾನು ಲಿಂಗಾಯತ ಲೀಡರ್ ಅಂತಾ ಹೇಳಿಕೊಂಡು ಹೋಗಿದ್ದಾರೆ. ಯಾರೇ ತಂತ್ರ, ಕುತಂತ್ರ ಮಾಡಿ ಸಮಾಜ ಒಡೆಯೋ ಕೆಲಸಕ್ಕೆ ಮುಂದಾದ್ರೆ ಅದು ನಡೆಯೋದಿಲ್ಲ ಎಂದು ಗುಡುಗಿದರು.
ನಾ ಹೇಳಿದ್ದ ಭವಿಷ್ಯ ನಿಜವಾಗಿದೆ : ಯಾರೇ ಮುಖ್ಯಮಂತ್ರಿ ಇದ್ದರೂ ಅವರ ನೇತೃತ್ವದಲ್ಲಿ ಚುನಾವಣೆ ನಡೆಯುತ್ತದೆ. ಬೊಮ್ಮಾಯಿ ನೇತೃತ್ವದಲ್ಲಿ ಮುಂದಿನ ಚುನಾವಣೆ ಎಂಬ ಕೇಂದ್ರ ಗೃಹ ಸಚಿವ ಅಮೀತ್ ಶಾರ ಹೇಳಿಕೆ ಸ್ವಾಗತಾರ್ಹ. ನಾನು ಹಿಂದೆ ಹೇಳಿದ್ದ ಭವಿಷ್ಯ ತಡವಾಗಿ ನಿಜ ಆಗಿದೆ ಎಂದು ತಿಳಿಸಿದರು.
ಎರಡು ಒಂದೇ : ವೀರಶೈವ ಲಿಂಗಾಯತ ಸಮುದಾಯ ಒಂದೇ. ಸುಮ್ಮನೆ ಎಂ ಬಿ ಪಾಟೀಲರು ಏನೇನೋ ಹೇಳಿಕೆ ನೀಡುತ್ತಾರೆ. ಅವರಿಗೆ ಪ್ರಾಯಶ್ಚಿತ ಆಗಿದೆ. ಲಿಂಗಾಯತ, ವೀರಶೈವ ಅಂತಾ ವಿವಾದ ಸೃಷ್ಟಸಿದ್ರೆ ನಮ್ಮ ದೇಶ ಉಳಿಯೋದಿಲ್ಲ ಎಂದು ಹೇಳಿದರು.
ಗಣೇಶೋತ್ಸವಕ್ಕೆ ಅಡ್ಡಿ ಬರುತ್ತಿದ್ದಾರೆ : ಗಣೇಶ ಚತುರ್ಥಿ ಆಚರಣೆ ಮಾಡಬೇಡಿ ಅಂತಾರೆ. ದೊಡ್ಡ ದೊಡ್ಡ ಕಾರ್ಯಕ್ರಮ ಮಾಡ್ತಾರೆ ಅಂತಾ ಸ್ವತಃ ತಮ್ಮ ಪಕ್ಷದ ಜನಾಶೀರ್ವಾದ ಯಾತ್ರೆಯ ಕುರಿತು ಕಿಡಿಕಾರಿದರು. ಅಲ್ಲದೆ, ಮೊಹರಂನಲ್ಲಿ ದಕ್ಕದಕ್ಕ ಕುಣಿದಿದ್ದಾರೆ. ಈಗ ಗಣೇಶೋತ್ಸವಕ್ಕೆ ಅಡ್ಡಿ ಬರುತ್ತಿದ್ದಾರೆ ಎಂದು ಶಾಸಕ ಯತ್ನಾಳ್ ಕಿಡಿಕಾರಿದರು.