ರಾಣೆಬೆನ್ನೂರು: ದೇಶಾದ್ಯಂತ ಕೊರೊನಾ ಎರಡನೇ ಅಲೆ ಪ್ರಾರಂಭವಾಗಿದ್ದು, ಎಲ್ಲರಿಗೂ ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಮನವಿ ಮಾಡಲಾಗಿದೆ. ಆದರೆ ರಾಣೆಬೆನ್ನೂರು ಶಾಸಕ ಅರುಣಕುಮಾರ ಪೂಜಾರ ಕೊರೊನಾ ನಿಯಮಾವಳಿ ಗಾಳಿಗೆ ತೂರಿದ್ದಾರೆ.
ರಾಜ್ಯ ಸರ್ಕಾರ ಕೊರೊನಾ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಹಲವು ರೀತಿಯ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ. ಅಲ್ಲದೆ ಸಾರ್ವಜನಿಕ ಸಭೆ, ಸಮಾರಂಭಗಳಲ್ಲಿ ಸಾರ್ವಜನಿಕರು ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ತಿಳಿಸಿದೆ. ಆದರೆ ಶಾಸಕ ಅರುಣಕುಮಾರ ಪೂಜಾರ ಮಾತ್ರ ಯಾವುದೇ ಸಾಮಾಜಿಕ ಅಂತರವಿಲ್ಲದೆ, ಮಾಸ್ಕ್ ಇಲ್ಲದೆ ಇರುವುದು ನೋಡಿದರೆ ಸರ್ಕಾರದ ಆದೇಶವನ್ನು ಪಾಲಿಸುತ್ತಿಲ್ಲ ಎನ್ನಿಸುತ್ತದೆ.
ರಾಣೆಬೆನ್ನೂರು ತಾಲೂಕಿನಲ್ಲಿ ಈಗಾಗಲೇ ಕೊರೊನಾ ಎರಡನೇ ಅಲೆಯಲ್ಲಿ 20 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ತಾಲೂಕು ಆರೋಗ್ಯ ಇಲಾಖೆಯ ಅಧಿಕಾರಿಗಳು ಕೊರೊನಾ ನಿಯಂತ್ರಣಕ್ಕೆ ದಿನ ನಿತ್ಯ ಜಾಗೃತಿ ಮೂಡಿಸುತ್ತಿದ್ದಾರೆ. ಆದರೆ ಸ್ಥಳೀಯ ಜನಪ್ರತಿನಿಧಿಗಳಾಗಲಿ, ಸಾರ್ವಜನಿಕರಾಗಲಿ ಈ ಬಗ್ಗೆ ಗಮನ ಹರಿಸದಿರುವುದು ಖೇದಕರ ಸಂಗತಿಯಾಗಿದೆ.