ಹಾವೇರಿ : ಉಪ ಚುನಾವಣೆಯಲ್ಲಿ ಬಿಜೆಪಿ ಗೆದ್ದಾಗಿದೆ ಎಂದು ಸಚಿವ ಮುನಿರತ್ನ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಜಿಲ್ಲೆಯ ಹಾನಗಲ್ ತಾಲೂಕಿನ ಅಕ್ಕಿ ಆಲೂರಿನಲ್ಲಿ ಅವರು ಮಾತನಾಡಿದರು. ಸರ್ಕಾರ ಒಳ್ಳೆಯ ಕೆಲಸ ಮಾಡುತ್ತಿದೆ. ಈ ಉಪ ಚುನಾವಣೆಯಲ್ಲಿ ನಾವು ಖಂಡಿತಾ ಗೆಲ್ಲುತ್ತೇವೆ ಎಂದು ತಿಳಿಸಿದರು.
ಉಪಚುನಾವಣೆಗಳಾದ ಶಿರಾ ಮತ್ತು ಆರ್‌ಆರ್‌ನಗರದಲ್ಲಿ ಉತ್ತರ ಸಿಕ್ಕಿದೆ. ಇನ್ನೊಂದು ಉತ್ತರಕ್ಕೆ ಕಾಂಗ್ರೆಸ್ ಪಕ್ಷದವರು ಸಿದ್ಧವಾಗುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು. ಪೊಲೀಸ್ ಅಧಿಕಾರಿಗಳು ಕೇಸರಿ ವಸ್ತ್ರ ಧರಿಸಿದ್ದ ಬಗ್ಗೆ ತಪ್ಪೇನಿದೆ? ಎಂದು ಸಮರ್ಥಿಸಿಕೊಂಡರು. ಅದರಲ್ಲಿ ಬಿಜೆಪಿ ಚಿಹ್ನೆ ಇದ್ದರೆ ಆಕ್ಷೇಪ ಮಾಡಬಹುದು. ಆದರೆ, ಅದರಲ್ಲಿ ಏನೂ ಇಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಬಿಜೆಪಿ ಚಿಹ್ನೆ ಇದ್ದರೆ ಹಾಕಿಕೊಂಡು ಕೇಸರಿ ವಸ್ತ್ರದ ಬಗ್ಗೆ ನಾನ್ಯಾಕೆ ಉತ್ತರ ಕೊಡಲಿ ಎಂದು ಪ್ರಶ್ನಿಸಿದ ಅವರು, ಕೇಸರಿ ಹಿಂದೂತ್ವದ ಸಂಕೇತ ಎಂದು ತಿಳಿಸಿದರು. ಸಿದ್ದರಾಮಯ್ಯ ಸೇರಿದಂತೆ ಕೆಲ ಕಾಂಗ್ರೆಸ್ ನಾಯಕರು ಆರ್ಎಸ್ಎಸ್ ಬಗ್ಗೆ ಮಾತನಾಡುತ್ತಾರೆ. ರಾಜಕಾರಣಕ್ಕಾಗಿ ಸಂಘಟನೆ ಬಗ್ಗೆ ತಪ್ಪು ಅಭಿಪ್ರಾಯಪಡುತ್ತಿದ್ದಾರೆ. ಆರ್ಎಸ್ಎಸ್ ಯಾವ ತಪ್ಪನ್ನೂ ಮಾಡಿಲ್ಲ ಎಂದು ಅವರು ತಿಳಿಸಿದರು.
ಚುನಾವಣೆ ಬಂದಾಗ ಮಾತ್ರ ಕಾಂಗ್ರೆಸ್ ಮುಖಂಡರು ಆರ್ಎಸ್ಎಸ್ ಗೂಂಡಾಗಿರಿ ಬಗ್ಗೆ ಮಾತನಾಡುತ್ತಾರೆ. ಚುನಾವಣೆ ಇಲ್ಲದಾಗ ಇವುಗಳ ಬಗ್ಗೆ ಮಾತನಾಡುವುದಿಲ್ಲ. 2023ರ ಚುನಾವಣಾ ಫಲಿತಾಂಶದ ಬಗ್ಗೆ ನಾನು ಮಾತನಾಡುವುದಿಲ್ಲ. ಬೆಂಗಳೂರಿನಲ್ಲಿ ಜನವಸತಿ ಕಟ್ಟಡಗಳು ಕುಸಿಯುತ್ತಿರುವುದನ್ನ ಸರ್ಕಾರ ಪತ್ತೆ ಹಚ್ಚುತ್ತಿದೆ.
ಇದರಲ್ಲಿ ಸರ್ಕಾರ ಒಳ್ಳೆಯ ಕೆಲಸ ಮಾಡುತ್ತಿದೆ. ಈ ರೀತಿ ಕುಸಿಯುವ ಕಟ್ಟಡಗಳನ್ನು ಮೊದಲೇ ಗುರ್ತಿಸಿ ಅವುಗಳನ್ನ ಕೆಡವುದು ಒಳ್ಳೆಯದು. ಇಲ್ಲದಿದ್ದರೆ ಜೀವಕ್ಕೆ ಅಪಾಯ. ಈ ರೀತಿ ಕೆಡವಿದ ಕಟ್ಟಡಗಳ ಜಾಗದಲ್ಲಿ ಸುಭದ್ರ ಕಟ್ಟಡ ಕಟ್ಟಲು ಅವಕಾಶ ನೀಡಬೇಕು ಎಂದು ಅಭಿಪ್ರಾಯಪಟ್ಟರು.
ಓದಿ: ಇದೇ ತಿಂಗಳು 25 ರಿಂದ 1-5ನೇ ತರಗತಿ ಆರಂಭ.. ಶೇ 50 ರಷ್ಟು ಮಾತ್ರ ಹಾಜರಾತಿ