ಹಾವೇರಿ: ಬಿಜೆಪಿ 40 ಪರ್ಸೆಂಟ್ ಸರ್ಕಾರ ಎಂಬ ರಾಹುಲ್ ಗಾಂಧಿ ಆರೋಪಕ್ಕೆ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ತಿರುಗೇಟು ನೀಡಿದ್ದಾರೆ. ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ಆರೋಪ ಮಾಡಲು ರಾಹುಲ್ ಗಾಂಧಿಗೆ ಯಾವ ನೈತಿಕತೆ ಇದೆ ಎಂದು ಪ್ರಶ್ನಿಸಿದ್ದಾರೆ.
ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಬೇಲ್ ಮೇಲೆ ಹೊರಗೆ ಇದ್ದಾರೆ. ಪರ್ಸೆಂಟೇಜ್ ಪಿತಾಮಹ ಎಂದರೆ ಅದು ಕಾಂಗ್ರೆಸ್ ಪಕ್ಷ. ಅವರಿಗೆ ನಮ್ಮ ಪಕ್ಷ ಹಾಗೂ ಸರ್ಕಾರದ ಬಗ್ಗೆ ಮಾತನಾಡುವ ಯಾವ ನೈತಿಕತೆಯೂ ಇಲ್ಲ. ನೈತಿಕತೆ ಇದ್ದರೆ ಕಾಂಗ್ರೆಸ್ನವರು ದಾಖಲಾತಿ ಒದಗಿಸಿ ಮಾತನಾಡಲಿ. ಈ ರೀತಿಯ ಹೇಳಿಕೆ ನೀಡುವುದನ್ನು ನಾನು ಖಂಡಿಸುತ್ತೇನೆ. ಇದರ ವಿರುದ್ಧ ನಮ್ಮ ಪಕ್ಷ ಹಾಗೂ ಕಾರ್ಯಕರ್ತರು ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಆರ್ಎಸ್ಎಸ್ ಬಗ್ಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅಸೂಯೆಯಿಂದ ಮಾತನಾಡುತ್ತಾರೆ. ಅದು ಒಂದು ರಾಷ್ಟ್ರೀಯ ಸ್ವಯಂ ಸೇವಕ ಸಂಸ್ಥೆ. ರಾಷ್ಟ್ರದ ಬಗ್ಗೆ ಅಪಾರವಾದ ಕಾಳಜಿ ಇಟ್ಟುಕೊಂಡು ದೇಶಭಕ್ತಿಯನ್ನು ಮೆರೆಸುವ ಕೆಲಸ ಮಾಡುತ್ತಿದೆ. ಅದು ನಮಗೆ ದೇಶ, ರಾಜ್ಯ ರಕ್ಷಣೆ ಮಾಡುವ ಬಗ್ಗೆ ಹಲವಾರು ಸಲಹೆ ಸೂಚನೆ ನೀಡುತ್ತದೆ. ಅದಕ್ಕೆ ಅವರನ್ನು ಕಂಡರೆ ಕಾಂಗ್ರೆಸ್‌ನವರಿಗೆ ಆಗುವುದಿಲ್ಲ. ಆರ್ಎಸ್ಎಸ್ ಬಗ್ಗೆ ಕಾಂಗ್ರೆಸ್‌ನವರಿಗೆ ಎಲ್ಲೋ ಒಂದು ಕಡೆ ಅಸೂಯೆ ಭಾವವಿದೆ ಎಂದರು.
ಪೇಸಿಎಂ ವಿಚಾರದ ಬಗ್ಗೆ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದ ಸಚಿವರು, ನಿಜಕ್ಕೂ ಇದು ನಾಚಿಕೆಗೇಡಿನ ಸಂಗತಿ. ಅವರು ಸಹ ಸಿಎಂ ಆಗಿದ್ದವರು. ಅವರ ತಮ್ಮ ಬೆನ್ನನ್ನು ಒಮ್ಮೆ ನೋಡಿಕೊಳ್ಳಲಿ. ಇದು ಅವರಿಗೆ ಶೋಭೆ ತರುವುದಿಲ್ಲ. ಪೇಸಿಎಂ ಹಾಕಿದ ತಕ್ಷಣ ಜನ ಏನು ಅವರ ಹಿಂದೆ ಓಡಿ ಹೋಗಿ ಬಿಡುವುದಿಲ್ಲ. ಮುಂದಿನ ದಿನಗಳಲ್ಲಿ ಜನ ತೀರ್ಮಾನ ಮಾಡುತ್ತಾರೆ. ಅವರ ತೀರ್ಮಾನಕ್ಕೆ ನಾವು ತಲೆ ಬಾಗುತ್ತೇವೆ ಎಂದು ಹೇಳಿದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಕಣ್ಣೀರು ಹಾಕುವ ವಿಚಾರವಾಗಿ ಮಾತನಾಡಿದ ಭೈರತಿ ಬಸವರಾಜ್, ಅವರು ಏನೇ ನಾಟಕ ಮಾಡಿದರು ಜನ ನಮಗೆ ಆಶೀರ್ವಾದ ಮಾಡುತ್ತಾರೆ. ನಮ್ಮ ಸರ್ಕಾರ ಮಾಡಿದ ಅಭಿವೃದ್ಧಿ ಕಾರ್ಯಗಳ ಮೇಲೆ ಮತದಾರರ ಹತ್ತಿರ ಹೋಗುತ್ತೇವೆ. ಜನ ನಮಗೆ ಆಶೀರ್ವಾದ ಮಾಡುತ್ತಾರೆ ಎಂದು ಸಚಿವರು ವಿಶ್ವಾಸ ವ್ಯಕ್ತಪಡಿಸಿದರು.
ಇದನ್ನೂ ಓದಿ: ಯಾವ ಶಕ್ತಿಯಿಂದಲೂ ಭಾರತ್ ಜೋಡೋ ಯಾತ್ರೆ ನಿಲ್ಲಿಸಲು ಸಾಧ್ಯವಿಲ್ಲ: ರಾಗಾ ಗುಡುಗು