ಹಾವೇರಿ: ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದವರು. ಯಾರೇ ಇರಲಿ, ಮಹಿಳೆಯರ ಬಗ್ಗೆ ಗೌರವಯುತವಾಗಿ ಮಾತನಾಡಬೇಕು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದ್ದಾರೆ.
ಜಿಲ್ಲೆಯ ಹಿರೇಕೆರೂರು ಪಟ್ಟಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೆಆರ್ಎಸ್ ಬಿರುಕು ಬಿಟ್ಟಿದೆ ಎಂದು ಸಂಸದೆ ಸುಮಲತಾ ಹೇಳಿದ್ದರು. ಆಗ ಸಂಬಂಧಿಸಿದ ಮಂತ್ರಿಗಳು, ಜನಪ್ರತಿನಿಧಿಗಳು ಆ ರೀತಿ ಯಾವುದೂ ಆಗಿಲ್ಲ ಎಂದು ಹೇಳಿಕೆ ಕೊಟ್ಟಿದ್ದರು. ಅವರನ್ನೇ ಅಡ್ಡ ಮಲಗಿಸಿ ಎಂದು ಕುಮಾರಸ್ವಾಮಿ ಹೇಳಿರೋದು ಸರಿಯಲ್ಲ. ಅವರೊಬ್ಬ ಮಾಜಿ ಮುಖ್ಯಮಂತ್ರಿ. ಮಹಿಳೆ ಬಗ್ಗೆ ಗೌರವಯುತವಾಗಿ ಮಾತನಾಡಬೇಕು ಎಂದು ತಿಳಿಸಿದರು.
ಇದನ್ನೂ ಓದಿ: KRS ರಕ್ಷಣೆಗೆ ಅವ್ರನ್ನೇ ಮಲಗಿಸಬೇಕೆಂದ ಹೆಚ್ಡಿಕೆ..ಭಾಷೆ ಮೇಲೆ ಹಿಡಿತ ಇಲ್ವಾ ಎಂದು ಕುಟುಕಿದ ಸಂಸದೆ ಸುಮಲತಾ
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯನವರ ಹೇಳಿಕೆಗೆ ಪ್ರತಿಕ್ರಿಯಿಸಿ, ಒಬ್ಬ ಮನುಷ್ಯನ ಮಾತುಗಳು ಅವರ ಸಂಸ್ಕೃತಿಯನ್ನು ತೋರಿಸುತ್ತದೆ. ಅವರ ಬಗ್ಗೆ ನಮಗೆ ಗೌರವ ಇದೆ. ಅವರು ಕೂಡಾ ಮಾಜಿ ಮುಖ್ಯಮಂತ್ರಿಯಾಗಿದ್ದವರು. ವೈಯಕ್ತಿಕವಾಗಿ ಒಬ್ಬ ಮನುಷ್ಯನ ಬಗ್ಗೆ ಹೀನಾಯವಾಗಿ ಮಾತನಾಡೋದು ಅವರ ಘನತೆಗೆ ಸರಿಯಲ್ಲ. ಅದು ಅವರ ಸಂಸ್ಕೃತಿಗೂ ಸರಿಯಲ್ಲ ಎಂದರು.
ಆಗಸ್ಟ್ ವೇಳೆಗೆ ಸಿಎಂ ಬದಲಾಗುತ್ತಾರೆ ಎಂದು ಭವಿಷ್ಯ ನುಡಿದಿರುವ ಶಾಸಕ ಯತ್ನಾಳ ಹೇಳಿಕೆ ವಿಚಾರವಾಗಿ ಮಾತನಾಡುತ್ತಾ, ಈಗಾಗಲೇ ಅರುಣ್ ಸಿಂಗ್ ರಾಜ್ಯಕ್ಕೆ ಬಂದು ಸ್ಪಷ್ಟವಾದ ಸಂದೇಶ ಕೊಟ್ಟಿದ್ದಾರೆ. ಇನ್ನೂ ಎರಡು ವರ್ಷ ಯಾವುದೇ ಮುಖ್ಯಮಂತ್ರಿ ಬದಲಾವಣೆ ಇಲ್ಲ. ಯಡಿಯೂರಪ್ಪನವರೆ ಸಿಎಂ ಆಗಿ ಮುಂದುವರಿತಾರೆ ಎಂದು ಹೇಳಿದ್ದಾರೆ.
ಹೀಗೆ ಹೇಳಿದ ಮೇಲೂ ದಿನಕ್ಕೊಂದು ಹೇಳಿಕೆ ಕೊಟ್ಟರೆ ಅವಕ್ಕೆಲ್ಲ ಉತ್ತರ ಕೊಡೋಕೆ ಆಗೋದಿಲ್ಲ. ಮುಂದಿನ ಎರಡು ವರ್ಷ ಯಡಿಯೂರಪ್ಪನವರೇ ಮುಖ್ಯಮಂತ್ರಿ ಆಗಿರುತ್ತಾರೆ. ಅವರ ನಾಯಕತ್ವದಲ್ಲೇ ಮುಂದಿನ ಚುನಾವಣೆಗೆ ಹೋಗುತ್ತೇವೆ ಎಂದರು.