ಹಾವೇರಿ: ಬಿಜೆಪಿಯಿಂದ ಕೆಲ ಶಾಸಕರು ಕಾಂಗ್ರೆಸ್‌ಗೆ ಬರುತ್ತಾರೆ ಎಂಬ ಡಿ.ಕೆ. ಶಿವಕುಮಾರ್ ಹೇಳಿಕೆ ಸತ್ಯಕ್ಕೆ ದೂರವಾದದ್ದು ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಅಭಿಪ್ರಾಯಪಟ್ಟಿದ್ದಾರೆ.
ಹಿರೇಕೆರೂರಲ್ಲಿ ಮಾತನಾಡಿದ ಅವರು ಬಿಜೆಪಿಗೆ ಬಂದ ಶಾಸಕರು ಕಾಂಗ್ರೆಸ್‌ಗೆ ವಾಪಸ್ ಹೋಗುವ ಪ್ರಮೇಯವೇ ಇಲ್ಲ ಎಂದು ಸ್ಪಷ್ಟಪಡಿಸಿದರು. ಡಿ.ಕೆ. ಶಿವಕುಮಾರ್ ಶಿರಾ ಮತ್ತು ಆರ್.ಆರ್. ನಗರದಲ್ಲಿ ಬಾಂಬ್ ಸಿಡಿಸಿ ಠುಸ್ ಆಗಿದ್ದಾರೆ. ಸಿಬಿಐ ದಾಳಿಗೆ ಬಿಜೆಪಿ ಕಡೆ ಕೈತೋರಿಸುವ ಡಿ.ಕೆ. ಶಿವಕುಮಾರ್ ಬೇರೆ ಪಕ್ಷದ ಮೇಲೆ ಗೂಬೆ ಕೂರಿಸಲು ಹೊರಟಿದ್ದಾರೆ. ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎಂಬ ಮನೋಭಾವನೆಯಲ್ಲಿ ಅವರಿದ್ದಾರೆ ಎಂದು ತಿಳಿಸಿದರು.
ಕೋಡಿ ಶ್ರೀಗಳ ರಾಜಕೀಯ ವಿಪ್ಲವದ ಭವಿಷ್ಯ ಕುರಿತಂತೆ ಮಾತನಾಡಿದ ಬಿ.ಸಿ. ಪಾಟೀಲ್, ಪರೋಕ್ಷವಾಗಿ ಕೋಡಿ ಶ್ರೀಗಳ ಭವಿಷ್ಯವನ್ನು ತಳ್ಳಿಹಾಕಿದರು. ನಾನು ರಾಜಕೀಯಕ್ಕೆ ಬರುವ ಮೊದಲು ಕೋಡಿಹಳ್ಳಿ ಶ್ರೀಗಳನ್ನು ಭೇಟಿ ಮಾಡಿದ್ದೆ. ಅವರು ನಿನಗೆ ರಾಜಕೀಯದಲ್ಲಿ ಭವಿಷ್ಯವಿಲ್ಲ ಎಂದಿದ್ದರು. ಆದರೆ ನಾನು ನಾಲ್ಕು ಬಾರಿ ಶಾಸಕನಾಗಿದ್ದೇನೆ ಒಂದು ಬಾರಿ ಸಚಿವನಾಗಿದ್ದೇನೆ. ಭವಿಷ್ಯದ ಮೇಲೆ ಎಲ್ಲವೂ ನಿರ್ಧಾರವಾಗಿಲ್ಲ. ಜನರ ಪ್ರೇಮ, ಜನರ ಮೇಲೆ ಹಿಡಿತ ಇಟ್ಟುಕೊಂಡವರಿಗೆ ರಾಜಕೀಯದಲ್ಲಿ ನೆಲೆ ಇದೆ ಎಂದು ತಿಳಿಸಿದರು.
ಬಿಜೆಪಿ ಸರ್ಕಾರ ಸಮಾಜ ಒಡೆಯುವ ಕೆಲಸ ಮಾಡುತ್ತಿದೆ: ಡಿಕೆಶಿ
ವಿಜಯನಗರ ನೂತನ ಜಿಲ್ಲೆಯಾಗಿರುವುದನ್ನು ಬಿ.ಸಿ.ಪಾಟೀಲ್ ಸ್ವಾಗತಿಸಿದರು. ಇದರಿಂದ ಜನರಿಗೆ ಒಳ್ಳೆಯದಾಗಲಿದೆ. ವಿಜಯನಗರ ಕೃಷ್ಣದೇವರಾಯನಿಗೆ ಗೌರವ ಸಲ್ಲಿಸಿದಂತೆ ಎಂದು ತಿಳಿಸಿದರು. ರಾಜ್ಯದಲ್ಲಿ ಇತರ ನೂತನ ಜಿಲ್ಲೆಗಳ ಸ್ಥಾಪನೆಯಾದಾಗ ವಿರೋಧ ವ್ಯಕ್ತವಾಗಲಿಲ್ಲ. ಆದರೆ ವಿಜಯನಗರ ಜಿಲ್ಲೆ ಸ್ಥಾಪನೆಗೆ ಯಾಕೆ ಇಷ್ಟು ವಿರೋಧ ಎಂದು ಪ್ರಶ್ನಿಸಿದರು.