ಹಾವೇರಿ : ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ ತಕ್ಷಣ ಯಾವುದೂ ಸತ್ಯ ಆಗಲ್ಲ ಎಂದು ಕೃಷಿ ಸಚಿವ ಬಿ ಸಿ ಪಾಟೀಲ್ ಕಿಡಿಕಾರಿದರು. ಹಾವೇರಿ ಜಿಲ್ಲೆಯ ಹಾನಗಲ್‍ನ ಚೀರನಹಳ್ಳಿ ಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿ ಶಿವರಾಜ ಸಜ್ಜನರ್ ಪರ ಬಿ ಸಿ ಪಾಟೀಲ್ ಅವರು ಪ್ರಚಾರ ಕೈಗೊಂಡಿದ್ದರು.
ಈ ವೇಳೆ ಬಿಜೆಪಿ ಅಭ್ಯರ್ಥಿ ಶಿವರಾಜ್ ಸಜ್ಜನರ್ ಸಂಗೂರು ಸಕ್ಕರೆ ಕಾರ್ಖಾನೆ ನುಂಗಿ ನೀರು ಕುಡಿದರು ಎಂಬ ಸಿದ್ದರಾಮಯ್ಯ ಆರೋಪದ ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿದರು.
2017ರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರಕ್ಕೆ ಸಿದ್ದರಾಮಯ್ಯ ಅವರು ಬಂದಾಗ ನಾನೂ ಇದ್ದೆ. ಆಗಲೂ ಸಿದ್ದರಾಮಯ್ಯ ಉದಾಸಿ ಅವರ ಮೇಲೆ ಹಲವು ಗಂಭೀರ ಆರೋಪ ಮಾಡಿದರು. ಆದರೆ, ಅದ್ಯಾವುದನ್ನೂ ಜನ ಕೇಳಲಿಲ್ಲ, ಉದಾಸಿ ಅವರು ಗೆದ್ದು ಬಂದಿದ್ದರು. ಸಿದ್ದರಾಮಯ್ಯ ಅವರು ಹೇಳಿದ ತಕ್ಷಣ ಯಾವುದೂ ಸತ್ಯ ಅಲ್ಲ. ಸಜ್ಜನರನ್ನೇ ಗೆಲ್ಲಿಸ್ತೀರೋ? ಅಥವಾ ದುರ್ಜನರನ್ನ ಗೆಲ್ಲಿಸ್ತೀರೋ? ನಾವು ಮತದಾರರನ್ನ ಕೇಳ್ತೇವೆ ಎಂದರು.
ಬಿಜೆಪಿ ಅಭ್ಯರ್ಥಿ ಗೆಲ್ಲಿಸುತ್ತೇವೆ : ಇಂದಿನಿಂದ ಕ್ಷೇತ್ರದಲ್ಲಿ ಪ್ರಚಾರ ಆರಂಭಿಸಿದ್ದೇನೆ. ಬಿಜೆಪಿ ಅಭ್ಯರ್ಥಿ ಗೆಲ್ಲಿಸುತ್ತೇವೆ. ನಾಳೆಯಿಂದ 7 ಜನ ಸಚಿವರು ಕ್ಷೇತ್ರದಲ್ಲೇ ಇರುತ್ತೇವೆ. ಸಿಎಂ ಬಸವರಾಜ ಬೊಮ್ಮಾಯಿ ನಾಳೆ ಹಾಗೂ ಅಕ್ಟೋಬರ್ 21, 22 ಹಾಗೂ 26 ಮತ್ತು 27ರಂದು ಕ್ಷೇತ್ರದಲ್ಲಿ ಪ್ರಚಾರ ಮಾಡುತ್ತಾರೆ ಎಂದು ತಿಳಿಸಿದರು.
ಸಿದ್ದರಾಮಯ್ಯ ಏಕೆ ಆ ರೀತಿ ಹೇಳ್ತಾರೋ ಗೊತ್ತಿಲ್ಲ : ಬಿಜೆಪಿಗೆ ಅನುಕೂಲ ಮಾಡಲೆಂದೇ ಕುಮಾರಸ್ವಾಮಿ ಟೀಕೆ ಮಾಡ್ತಿದ್ದಾರೆ ಎಂಬ ಸಿದ್ದರಾಮಯ್ಯ ಆರೋಪ ವಿಚಾರವಾಗಿ ಪ್ರತಿಕ್ರಿಯಿಸಿ, ಕುಮಾರಸ್ವಾಮಿ ಅವರು ಸಿಎಂ ಆಗಿ ಎರಡು ಬಾರಿ ಕೆಲಸ ಮಾಡಿದ್ದಾರೆ. ಅವರು ಒಂದು ಪ್ರಾದೇಶಿಕ ಪಕ್ಷದ ನಾಯಕರಾಗಿ ಮಾತಾಡ್ತಾರೆ.
ಆದರೆ, ಸಿದ್ದರಾಮಯ್ಯ ಅವರು ಏಕೆ ಆ ರೀತಿ ಹೇಳ್ತಾರೋ ಗೊತ್ತಿಲ್ಲ. ಇವರು ಯಾರನ್ನು ಓಲೈಕೆ ಮಾಡ್ತಿದ್ದಾರೆ ಹಾಗಾದರೆ? ಮಾತೆತ್ತಿದರೆ ಅಲ್ಪಸಂಖ್ಯಾತರಿಗೆ 13,000 ಕೋಟಿ ಬಜೆಟ್ ನಲ್ಲಿ ಕೊಡ್ತೀನಿ ಅಂತಾರೆ. ಈಗಿನಿಂದಲೇ ಆಮಿಷ ಒಡ್ತಿದ್ದಾರೆ. ಇದು ಪ್ರಜಾಪ್ರಭುತ್ವಕ್ಕೆ ವಿರುದ್ಧವಾದ ಹೇಳಿಕೆ ಅಲ್ಲವಾ? ಎಂದು ಪ್ರಶ್ನಿಸಿದರು.
ಸಿದ್ದರಾಮಯ್ಯಗೆ ಬಿ.ಎಲ್ ಸಂತೋಷ್ ಫೋನ್ ಮಾಡಿ ಹೇಳಿದ್ರಾ?: ಮಾಜಿ ಸಿಎಂ ಯಡಿಯೂರಪ್ಪ ಅವರಿಗೆ ಪ್ರಚಾರಕ್ಕೆ ಬರಲು ಮನಸ್ಸಿಲ್ಲ. ಬಿ.ಎಲ್ ಸಂತೋಷ್ ಮೂಲಕ ಬಿಎಸ್ವೈ ಅವರನ್ನು ಬಲವಂತದಿಂದ ಪ್ರಚಾರಕ್ಕೆ ಕರೆದುಕೊಂಡು ಬರಲಾಗುತ್ತಿದೆ ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ಸಿದ್ದರಾಮಯ್ಯಗೆ ಬಿ.ಎಲ್ ಸಂತೋಷ್ ಫೋನ್ ಮಾಡಿ ಹೇಳಿದ್ರಾ?.ಇವರ ಊಹೆಗೆ ನಾವು ಉತ್ತರ ಕೊಡೋಕೆ ಆಗಲ್ಲ ಎಂದರು.
ಯಡಿಯೂರಪ್ಪ ಪ್ರಬುದ್ಧ ನಾಯಕ. ಪಕ್ಷದ ಋಣ ತೀರಿಸುವುದಾಗಿ ಹೇಳಿದ್ದಾರೆ. ಬಿಎಸ್ವೈಗೆ ದೊಣ್ಣೆ ನಾಯಕನ ಅಪ್ಪಣೆ ಏನೂ ಬೇಡ. ಅದಕ್ಕೆಲ್ಲ ಉತ್ತರ ಕೊಡಲು ಆಗಲ್ಲ. ಸಿದ್ದರಾಮಯ್ಯ ಕೇಳಿಕೊಂಡು ಯಡಿಯೂರಪ್ಪ ಬರಬೇಕಾ?. ಎರಡು ಸ್ಥಾನದಿಂದ 110 ಸ್ಥಾನ ತಂದಿದ್ದು ಯಡಿಯೂರಪ್ಪ. ಉಪಚುನಾವಣೆ ಬಂದಿದೆ. ಬಿಎಸ್ವೈ ಬರ್ತಾರೆ. ಇವರ ಪರ್ಮಿಷನ್ ತಗೊಬೇಕಾ ಯಡಿಯೂರಪ್ಪ ಅವರು? ಎಂದು ಕಿಡಿಕಾರಿದರು.
ರಾಮಮಂದಿರ ಭಾವನೆಗಳ ಸಂಕೇತ : ರಾಮಮಂದಿರ ವಿಚಾರವಾಗಿ ಮಾತನಾಡಿದ ಅವರು, ರಾಮಮಂದಿರಕ್ಕೆ ಎಲ್ಲರಿಂದ ಒಂದೊಂದು ಇಟ್ಟಿಗೆ ಸಂಗ್ರಹ ಮಾಡುತ್ತಿದ್ದಾರೆ. ಅದೇ ಇಟ್ಟಿಗೆಯಲ್ಲಿ ದೇವಸ್ಥಾನ ಕಟ್ಟತ್ತಾರೆ ಎಂದು ಯಾವ ಮೂರ್ಖನೂ ಹೇಳಲ್ಲ. ರಾಮಮಂದಿರ ಭಾವನೆಗಳ ಸಂಕೇತ. ರಾಮಮಂದಿರ 2023ಕ್ಕೆ ಲೋಕಾರ್ಪಣೆ ಆಗಲಿದೆ.
ಅದನ್ನು ಕಟ್ಟೋಕೆ ಸಾವಿರಾರು ಕೋಟಿ ಕೊಡೋಕೆ ಹಲವರು ಸಿದ್ಧರಿದ್ದಾರೆ. ಆದರೆ, ಮಂದಿರದ ಟ್ರಸ್ಟ್ ಅವರು ಇದು ಭಾರತೀಯರ ರಾಮಮಂದಿರ ಆಗಬೇಕು. ಇದು ಪ್ರತಿಯೊಬ್ಬರ ಬೆವರ ಹನಿಯ ಸಂಕೇತ ಆಗಬೇಕು ಅಂತಾ ಹೇಳಿದ್ದಾರೆ ಎಂದರು.
ಮತದಾರ ಪ್ರಭು ಬುದ್ಧಿವಂತ : ಆಯಕಟ್ಟಿನ ಜಾಗಗಳಲ್ಲಿ ಆರ್ಎಸ್ಎಸ್ ನವರೇ ಇದ್ದು, ಲಕ್ಷಾಂತರ ಹಣ ತೆಗೆದುಕೊಳ್ಳುತ್ತಾರೆ ಎಂಬ ಹೆಚ್ಡಿಕೆ ಹೇಳಿಕೆ ವಿಚಾರವಾಗಿ ಮಾತನಾಡಿ, ಕುಮಾರಸ್ವಾಮಿ ಅಧಿಕಾರದಲ್ಲಿ ಇದ್ದಾಗ ಅವರ ಬಳಗ ಇತ್ತು. ಸಿದ್ದರಾಮಯ್ಯ ಇದ್ದಾಗ ಅವರ ಭಕ್ತರೇ ಇದ್ದರು.
ಆಯಾಯ ಸರ್ಕಾರ ಬಂದಾಗ ಇರುವುದು ಸಹಜ. ಜನರ ಮೈಂಡ್ ಡೈವರ್ಟ್ ಮಾಡಲು ಕುಮಾರಸ್ವಾಮಿ ಆ ರೀತಿ ಮಾತನಾಡುತ್ತಾರೆ. ಆದರೆ, ಮತದಾರ ಪ್ರಭು ಬುದ್ಧಿವಂತ. ಮತದಾರ ಈಗಾಗಲೇ ಯಾರಿಗೆ ವೋಟು ಹಾಕಬೇಕು ಎಂದು ತೀರ್ಮಾನ ಮಾಡಿರುತ್ತಾನೆ ಎಂದು ತಿಳಿಸಿದರು.