ಹಾವೇರಿ: ಮನುಷ್ಯರು ಯಾರೇ ಆಗಲಿ ಬದುಕಿದ್ದಾಗ ಅವರ ಉತ್ಸವಗಳನ್ನು ಮಾಡಿಕೊಳ್ಳುವುದಿಲ್ಲ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಸಿದ್ದರಾಮೋತ್ಸವ ಕುರಿತು ವ್ಯಂಗ್ಯವಾಡಿದರು. ಹಿರೇಕೆರೂರು ತಾಲೂಕಿನ ಕೋಡ ಗ್ರಾಮದಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದ ಬಳಿಕ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು.
"ದೇವರ ಉತ್ಸವಗಳನ್ನು ಮಾಡುತ್ತೇವೆ. ಮನುಷ್ಯ ಬದುಕಿದ್ದ ಸಮಯದಲ್ಲಿ ದೇವರು ಆಗೋಕೆ ಆಗಲ್ಲ. ಮಳೆ ಬಂದಿದೆ, ನೆರೆ ಬಂದಿದೆ, ಬಹಳಷ್ಟು ಹಾನಿಯಾಗಿದೆ. ಸರ್ಕಾರವನ್ನು ಕಟುವಾಗಿ ಟೀಕೆ ಮಾಡುವ ಸಮಾಜವಾದಿ ಸಿದ್ದರಾಮಯ್ಯನವರು ಇಂಥ ಪರಿಸ್ಥಿತಿಯಲ್ಲಿ ಸಿದ್ದರಾಮೋತ್ಸವ ಮಾಡಿಕೊಳ್ಳೋದು ಎಷ್ಟರ ಮಟ್ಟಿಗೆ ಸರಿ?" ಎಂದರು.
ಇದನ್ನೂ ಓದಿ: ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ಸಿಎಂ ಬೊಮ್ಮಾಯಿ ದಂಪತಿ
"ಕೂಸು ಹುಟ್ಟೋ ಮುನ್ನವೇ ಕುಲಾವಿ ಹೊಲಿಸಿದರು ಅನ್ನೋ ಹಾಗಾಗಿದೆ ಕಾಂಗ್ರೆಸ್ ಪರಿಸ್ಥಿತಿ. ಚುನಾವಣೆಗೆ ಇನ್ನೂ ಹತ್ತು ತಿಂಗಳಿದೆ. ಈಗಲೇ ಕಾಂಗ್ರೆಸ್ ಪಕ್ಷ ಆಡಳಿತಕ್ಕೆ ಬಂದವರ ರೀತಿ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಅಧಿಕಾರಕ್ಕೆ ಕಿತ್ತಾಡೋದು ಮೂರ್ಖತನದ ಪರಮಾವಧಿ. ಎಲ್ಲವನ್ನೂ ಜನರು ತೀರ್ಮಾನ ಮಾಡಬೇಕು. ಮುಂದಿನ ಬಾರಿಯೂ ಬಿಜೆಪಿ 150 ಸೀಟುಗಳನ್ನು ಗೆದ್ದು ಅಧಿಕಾರಕ್ಕೆ ಬರಲಿದೆ" ಎಂದು ವಿಶ್ವಾಸ ವ್ಯಕ್ತಪಡಿಸಿದರು.