ಹಾವೇರಿ: ಕಾಂಗ್ರೆಸ್ ಪಕ್ಷದ ಮುಖಂಡರೆಲ್ಲಾ ಒಂದು ರೀತಿಯಲ್ಲಿ ಹತ್ತು ತಲೆ ರಾವಣನಿದ್ದಂತೆ ಎಂದು ಸಾರಿಗೆ ಸಚಿವ ಬಿ. ಶ್ರೀರಾಮುಲು ಅಭಿಪ್ರಾಯಪಟ್ಟಿದ್ದಾರೆ.
ಹಾನಗಲ್ ತಾಲೂಕಿನ ಕೆಲವರಕೊಪ್ಪದಲ್ಲಿ ಮಾತನಾಡಿದ ಅವರು, ಮಾಜಿ ಸಚಿವ ಸಿಎಂ ಉದಾಸಿ ಸಚಿವ ಸ್ಥಾನ ಸಿಗದ ಕೊರಗಿನಲ್ಲಿ ಸಾವನ್ನಪ್ಪಿದ್ರು ಎಂಬ ಡಿಕೆಶಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದರು.
ಕಾಂಗ್ರೆಸ್ ಮುಖಂಡರು ಸುಳ್ಳನ್ನೇ ಹೇಳಿಕೊಂಡು ಹೋಗುತ್ತಿದ್ದಾರೆ. ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗ ಜಾತಿ ಜಾತಿಗಳ ನಡುವೆ ಜಗಳ ಹಚ್ಚಿದ ಕಾರಣ ಅವರ ಪಕ್ಷವನ್ನ ಜನ ಕೆಡವಿದರು. ಸಿಎಂ ಉದಾಸಿ ಬಗ್ಗೆ ಮೃದು ಧೋರಣೆ ತೋರಿದರೆ ಕಾಂಗ್ರೆಸ್‌ಗೆ ಮತಗಳು ಬರಬಹುದು ಎಂದು ಅವರು ಈ ರೀತಿಯ ಹೇಳಿಕೆ ನೀಡುತ್ತಿದ್ದಾರೆ ಎಂದು ಆರೋಪಿಸಿದರು.
ಹಾನಗಲ್ ಜನ ಬುದ್ದಿವಂತರಿದ್ದಾರೆ. ಯಾವುದು ಸತ್ಯ, ಯಾವುದು ಸುಳ್ಳು ಎಂಬುದು ಗೊತ್ತಿದೆ. ವಾಲ್ಕೀಕಿ ಸಮಾಜದ ನನಗೆ ಡಿಸಿಎಂ ಸ್ಥಾನ ನೀಡಲಿಲ್ಲ ಎಂದು ಕಾಂಗ್ರೆಸ್ ಮುಖಂಡರು ಆರೋಪಿಸುತ್ತಾರೆ. ಕಾಂಗ್ರೆಸ್‌ನವರು ವಾಲ್ಮೀಕಿ ಸಮಾಜಕ್ಕೆ ಏನು ಮಾಡಿದ್ದೀರಾ?. ವಾಲ್ಮೀಕಿ ಜಯಂತಿ ಘೋಷಣೆ ಮಾಡಿದ್ದೆ ಬಿಜೆಪಿ ಸರ್ಕಾರ. ಬಿಜೆಪಿ ವಾಲ್ಮೀಕಿ ಸಮಾಜಕ್ಕೆ ನೀಡಿದ ಭರವಸೆಗಳನ್ನು ಈಡೇರಿಸಿದೆ ಎಂದು ಸಮರ್ಥಿಸಿಕೊಂಡರು.
ಸದ್ಯ ಬಿಜೆಪಿಯಲ್ಲಿ ಡಿಸಿಎಂ ಹುದ್ದೆ ಸೃಷ್ಟಿಸುವ ಸಾಧ್ಯತೆ ಇಲ್ಲ. ಒಂದು ವೇಳೆ ಸಾಧ್ಯವಾದರೆ ಬಿಜೆಪಿ ಮುಖಂಡರು ನನಗೆ ಡಿಸಿಎಂ ಸ್ಥಾನ ನೀಡುತ್ತಾರೆ. ಬಿಜೆಪಿ ಆಂತರಿಕ ವಿಚಾರಗಳ ಬಗ್ಗೆ ಮಾತನಾಡಲು ಕಾಂಗ್ರೆಸ್ ಮುಖಂಡರು ಯಾರು? ಎಂದು ಶ್ರೀರಾಮುಲು ಪ್ರಶ್ನಿಸಿದರು.
ಇದನ್ನೂ ಓದಿ: 'ಸಚಿವ ಸ್ಥಾನ ಸಿಗದ ಕೊರಗಿನಲ್ಲಿ ಸಿಎಂ.ಉದಾಸಿ ಪ್ರಾಣ ಬಿಟ್ಟರು': ಡಿ.ಕೆ.ಶಿವಕುಮಾರ್