ಹಾನಗಲ್: ಗೋವಾ, ಕೇರಳ, ಮಂಗಳೂರು ಸೇರಿದಂತೆ ಕೆಲಸ ಅರಸಿಕೊಂಡು ಗುಳೆ ಹೋಗಿದ್ದ ತಾಲೂಕಿನ ಜನರು ಈಗ ಊರಿನತ್ತ ಮುಖಮಾಡಿದ್ದಾರೆ. ಹೀಗಾಗಿ ಊರಿಗೆ ಮರಳಿದವರಿಂದ ಕೊರೊನಾ ಸೋಂಕು ಹರಡೋ ಭೀತಿ ಎದುರಾಗಿದೆ. ಗ್ರಾಮಗಳಿಗೆ ಪ್ರವೇಶಿಸುವ ಮುನ್ನ ತಪಾಸಣೆ ಮಾಡಿಸಿಕೊಂಡು ವೈದ್ಯರ ಪತ್ರ ತೆಗೆದುಕೊಂಡು ಊರಿಗೆ ಬರುವಂತೆ ಆಯಾ ಗ್ರಾಮಸ್ಥರೇ ಕಟ್ಟಪ್ಪಣೆ ಹೊರಡಿಸಿದ್ದಾರೆ.
ಗೋವಾ, ಕೇರಳ ಮತ್ತು ಮಂಗಳೂರು ಭಾಗದಿಂದ ಬಂದ ನೂರಾರು ಸಂಖ್ಯೆಯ ಜನರು ತಪಾಸಣೆಗಾಗಿ ಒಮ್ಮೆಲೇ ತಾಲೂಕು ಸರ್ಕಾರಿ ಆಸ್ಪತ್ರೆಗೆ ಆಗಮಿಸಿದ್ದಾರೆ. ಒಂದೇ ಬಾರಿ ನೂರಾರು ಸಂಖ್ಯೆಯಲ್ಲಿ ಜನರು ಆಸ್ಪತ್ರೆಗೆ ಆಗಮಿಸಿದ್ದರಿಂದ ಎಲ್ಲರಿಗೂ ಚಿಕಿತ್ಸೆ ನೀಡಿ ವರದಿ ಕೊಡಲು ಆಸ್ಪತ್ರೆ ವೈದ್ಯರು ಮತ್ತು ಸಿಬ್ಬಂದಿ ಪರದಾಡೋ ಸ್ಥಿತಿ ನಿರ್ಮಾಣವಾಗಿದೆ. ನಾಲ್ವರು ವೈದ್ಯರು ಮತ್ತು ಹದಿನೈದಕ್ಕೂ ಅಧಿಕ ಸಿಬ್ಬಂದಿ ಇದ್ರೂ ಮುನ್ನೂರಕ್ಕೂ ಅಧಿಕ ಸಂಖ್ಯೆಯ ಜನರು ಒಂದೇ ಬಾರಿ ಬಂದು ಕ್ಯೂ ನಿಂತಿದ್ದರಿಂದ ಎಲ್ಲರಿಗೂ ಏಕಕಾಲಕ್ಕೆ ಚಿಕಿತ್ಸೆ ನೀಡೋದು ಕಷ್ಟವಾಗಿದೆ.
ಇನ್ನು, ಆಸ್ಪತ್ರೆ ವೈದ್ಯರು ಮತ್ತು ಸಿಬ್ಬಂದಿ ಯಾರಿಗೂ ತೊಂದ್ರೆ ಆಗದಂತೆ ಚಿಕಿತ್ಸೆ ನೀಡಿ ಮನೆಗೆ ಕಳುಹಿಸುತ್ತಿದ್ದಾರೆ.