ಹಾವೇರಿ: ಗುರುವಾರ ನಿಧನರಾದ ಎಂಡಿಹೆಚ್ ಗ್ರೂಪ್ ಮುಖ್ಯಸ್ಥ ಮಹಾಶಯ ಧರ್ಮಪಾಲ ನನ್ನನ್ನು ಮಗನಂತೆ ನೋಡಿಕೊಂಡರು. ಪ್ರತಿವರ್ಷ ಅವರು ಎಂಡಿಹೆಚ್ ಮಸಾಲೆಗೆ ನೂರು ಕೋಟಿ ರೂಪಾಯಿ ಮೌಲ್ಯದ ಮೆಣಸಿನಕಾಯಿ ಕಳಿಸಿಕೊಡುತ್ತಿದ್ದೆ ಎಂದು ಹಾವೇರಿ ಜಿಲ್ಲೆ ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆಯ ವರ್ತಕ ಸುರೇಶಗೌಡ ಪಾಟೀಲ್ ಹೇಳಿದ್ದಾರೆ.
25 ವರ್ಷಗಳ ಹಿಂದೆ ಎಂಡಿಹೆಚ್ ಕಂಪನಿಗೆ ಜೊತೆ ಮಾತುಕತೆಗೆ ಹೋದಾಗ ಮಹಾಶಯ ಧರ್ಮಪಾಲ ಪರಿಚಯವಾದರು. ಅಲ್ಲಿಂದ ನನ್ನನ್ನು ಸ್ವಂತ ಮಗನಂತೆ ನೋಡಿಕೊಂಡರು. ದೇಶ ವಿದೇಶಗಳಿಗೆ ಬ್ಯಾಡಗಿ ಮೆಣಸಿನಕಾಯಿ ಪರಿಚಯಿಸಿದ ಖ್ಯಾತಿ ಧರ್ಮಪಾಲ ಮಹಾಶಯರದ್ದು. ಇಲ್ಲಿಂದ ಉತ್ಕೃಷ್ಟವಾದ ಮೆಣಸಿನಕಾಯಿ ಖರೀದಿಸುತ್ತಿದ್ದ ಮಹಾಶಯ ಧರ್ಮಪಾಲ, ಅದನ್ನ ತಮ್ಮ ಉತ್ಪನ್ನಗಳಿಗೆ ಬಳಕೆ ಮಾಡುತ್ತಿದ್ದರು. ಇಲ್ಲಿನ ಮೆಣಸಿನಕಾಯಿ ರುಚಿ, ಬಣ್ಣ, ವಾಸನೆ ಅವರಿಗೆ ಇಷ್ಟವಾಗಿತ್ತು. ಹೀಗಾಗಿ ಪ್ರತಿ ವರ್ಷ ನೂರು ಕೋಟಿ ರೂಪಾಯಿ ವಹಿವಾಟು ನಡೆಸುತ್ತಿದ್ದೆ ಎಂದಿದ್ದಾರೆ.
ಮಹಾಶಯ ಧರ್ಮಪಾಲ ಅವರು ವ್ಯಾಪಾರದಲ್ಲಿ ಯಾವಾಗಲು ಪ್ರಮಾಣಿಕತೆ ಮೆರೆದವರು. ದಿನನಿತ್ಯ ಸಾವಿರ ಜನ ಕೂಲಿ ಕಾರ್ಮಿಕರು ಅವರ ಉತ್ಪನ್ನಕ್ಕಾಗಿ ಬ್ಯಾಡಗಿಯಲ್ಲಿ ಮೆಣಸಿನಕಾಯಿ ತುಂಬು ತಗೆಯುವ ಕೆಲಸ ಮಾಡುತ್ತಿದ್ದಾರೆ. ಅವರ ಮಕ್ಕಳಿಗಾಗಿ ಐದು ಎಕರೆ ವಿಸ್ತಿರ್ಣದಲ್ಲಿ ಬ್ಯಾಡಗಿಯಲ್ಲಿ ಮಹಾಶಯ ಧರ್ಮಪಾಲ ಶಾಲೆ ತಗೆದಿದ್ದಾರೆ. ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆಯಲ್ಲಿ ಕೆಲಸ ಮಾಡುವ ಕೂಲಿಕಾರ್ಮಿಕರ ಮಕ್ಕಳಿಗಾಗಿ ಈ ಶಾಲೆ ಮೀಸಲಾಗಿದೆ. ಈ ಶಾಲೆಯಲ್ಲಿ ಪ್ರವೇಶ ಉಚಿತವಾಗಿದ್ದು, ಸಮವಸ್ತ್ರ, ಪುಸ್ತಕ, ಉಚಿತ ಊಟ ಸೇರಿದಂತೆ ವೈದ್ಯಕೀಯ ಸೇವೆಯನ್ನ ಸಹ ನೀಡಲಾಗುತ್ತಿದೆ. ಎಂಡಿಹೆಚ್ ಕಂಪನಿಯ ಮಹಾಶಯ ಧರ್ಮಪಾಲರಿಗೆ ಬಡವರನ್ನ ಕಂಡರೆ ಬಹಳ ಪ್ರೀತಿ. ಅವರ ಮನಸ್ಸು ಬಡವರಿಗಾಗಿ ತುಡಿಯುತ್ತಿತ್ತು ಎಂದು ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆಯ ವರ್ತಕ ರಾಜು ಮೊರಗೇರಿ ಹೇಳಿದ್ದಾರೆ.
ಭಾರತದಲ್ಲಿ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಬ್ಯಾಡಗಿ ಹೆಸರು ಮನೆ ಮಾತಾಗಲು ಅವರೇ ಕಾರಣ. ಹಲವರು ಮಸಾಲೆ ಪದಾರ್ಥಗಳ ತಯಾರಿಕೆಯಿಂದ ಪ್ರಸಿದ್ದಿಯಾಗಿದ್ದ ಮಹಾಶಯ ಧರ್ಮಪಾಲರನ್ನು ಬ್ಯಾಡಗಿ ಮೆಣಸಿನಕಾಯಿ ಆಕರ್ಶಿಸಿತ್ತು. ತಮ್ಮ ಉತ್ಪನ್ನಗಳಿಗೆ ಬ್ಯಾಡಗಿ ಮೆಣಸಿನಕಾಯಿ ಬಳಸುವ ಮೂಲಕ ಬ್ಯಾಡಗಿ ಮೆಣಸಿನಕಾಯಿಯ ಖ್ಯಾತಿಯನ್ನ ವಿಶ್ವಕ್ಕೆ ಪಸರಿಸಿದ ಕೀರ್ತಿ ಧರ್ಮಪಾಲ ಮಹಾಶಯ ಅವರದ್ದು. ಅವರಿಲ್ಲ ಎನ್ನುವುದು ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆಯ ಸಾವಿರಾರು ಕೂಲಿ ಕಾರ್ಮಿಕರಿಗೆ, ವರ್ತಕರಿಗೆ ನೋವು ತಂದಿದೆ ಎಂದಿದ್ದಾರೆ.