ಹಾವೇರಿ: ಕೋವಿಡ್ ನಿಯಂತ್ರಣಕ್ಕಾಗಿ ಸರ್ಕಾರ ಹಲವು ಕಠಿಣ ನಿಯಮಗಳನ್ನು ಜಾರಿಗೆ ತಂದಿದೆ. ಆದರೆ ನಿಯಮಗಳಿಂದಾಗಿ ಹಾವೇರಿಯ ಬಿಡಾಡಿ ದನಗಳಿಗೆ ಆಹಾರ ಸಿಗದೆ ಪರದಾಡುವಂತಾಗಿದೆ.
ಮುಂಜಾನೆ 10 ಗಂಟೆಯವರೆಗೆ ಮಾತ್ರ ಅಂಗಡಿಗಳು ಕಾರ್ಯನಿರ್ವಹಿಸುವ ಕಾರಣ ಬಿಡಾಡಿ ದನಗಳು ಆಹಾರ ಸಿಗದೇ ಪರದಾಡುತ್ತಿವೆ. ಈ ದನಗಳಿಗೆ ಹೋಟೆಲ್ನವರು, ತರಕಾರಿ-ಹಣ್ಣು ಮಾರುವ ವರ್ತಕರು ದಿನನಿತ್ಯ ಆಹಾರ ನೀಡುತ್ತಿದ್ದರು. ಪಾನ್ ಶಾಪ್ ಅಂಗಡಿಯವರು ಸಹ ಬಾಳೆಹಣ್ಣು, ಸಿಹಿ ನೀಡುತ್ತಿದ್ದರು.
ಆದರೆ ಕಳೆದ ಎರಡು ದಿನಗಳಿಂದ ಹೋಟೆಲ್, ಪಾನ್ ಶಾಪ್, ಹಣ್ಣಿನ ಅಂಗಡಿಯವರಿಗೆ ಕೇವಲ ಮುಂಜಾನೆ 10 ಗಂಟೆಯವರೆಗೆ ಸೇವೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಇದರಿಂದಾಗಿ ಬಿಡಾಡಿ ದನಗಳಿಗೆ ಆಹಾರ ನೀಡುವವರಿಲ್ಲದಂತಾಗಿದೆ. ಪರಿಣಾಮ, ಹಾವೇರಿಯ ಹೊಸಮನಿ ಸಿದ್ದಪ್ಪ ವೃತ್ತ ಸೇರಿದಂತೆ ಹಲವು ವೃತ್ತಗಳಲ್ಲಿ ದನಗಳು ಅಲೆದಾಡುತ್ತಿವೆ.
ಇದನ್ನೂ ಓದಿ: 'ಬ್ಲಾಕ್ ಫಂಗಸ್ ಬಗ್ಗೆ ತಜ್ಞರ ವರದಿ ಕೇಳಿದ್ದೇವೆ, ಉಚಿತ ಚಿಕಿತ್ಸೆ ಬಗ್ಗೆ ಶೀಘ್ರವೇ ನಿರ್ಧಾರ'
ನಗರದಲ್ಲಿ ಸುಮಾರು 20ಕ್ಕೂ ಅಧಿಕ ಬಿಡಾಡಿ ದನಗಳಿವೆ. ಆಹಾರವಿಲ್ಲದೇ ಈ ದನಗಳು ಅನುಭವಿಸುತ್ತಿರುವ ಮೂಕ ರೋದನೆ ನೋಡುಗರ ಮನ ಕರುಗಿಸುವಂತಿದೆ. ಯಾವುದಾದರು ಮನೆಯವರು ಆಹಾರ ನೀಡಿದರೆ ತಿನ್ನುತ್ತವೆ, ಇಲ್ಲದಿದ್ದರೆ ಉಪವಾಸ ಇರುತ್ತವೆ. ನಗರಸಭೆ ಈ ದನಗಳನ್ನು ಲಾಕ್ಡೌನ್ ಮುಗಿಯುವವರೆಗೆ ಗೋ ಶಾಲೆಗಳಲ್ಲಿ ಬಿಟ್ಟು ಬರುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ. ಇಲ್ಲವೇ ಬಿಡಾಡಿ ದನಗಳಿಗೆ ಸೂಕ್ತ ಆಹಾರ ವ್ಯವಸ್ಥೆ ಕಲ್ಪಿಸುವಂತೆ ಮನವಿ ಮಾಡಿದ್ದಾರೆ.