ಬೆಂಗಳೂರು: ಧ್ವನಿವರ್ಧಕಗಳಿಗೆ ಒಂದು ತಿಂಗಳು ಮೇಲ್ಪಟ್ಟ ಅವಧಿಯ ಪರವಾನಿಗೆಗೆ ಒಟ್ಟು 450 ರೂ. ನಿಗದಿಪಡಿಸಿ ಸರ್ಕಾರ ಆದೇಶ ಹೊರಡಿಸಿದೆ. ಈ ಹಿಂದಿನ ಆದೇಶದಲ್ಲಿ ಧ್ವನಿವರ್ಧಕಗಳಿಗೆ ಗರಿಷ್ಠ ಒಂದು ತಿಂಗಳ ಅವಧಿಗೆ ಮಾತ್ರ ಶುಲ್ಕ ವಿಧಿಸಲಾಗುತ್ತಿತ್ತು. ಒಂದು ತಿಂಗಳಿಗಿಂತ ಮೇಲ್ಪಟ್ಟು ಕೊಡುವಂತಹ ಪರವಾನಿಗೆಗಳಿಗೆ ಶುಲ್ಕ ನಿಗದಿಪಡಿಸಿರಲಿಲ್ಲ. ಇದೀಗ ಸರ್ಕಾರ ಒಂದು ತಿಂಗಳ ಮೇಲ್ಪಟ್ಟ ಧ್ವನಿವರ್ಧಕಗಳ ಬಳಕೆಯ ಪರವಾನಿಗೆಗೆ ಶುಲ್ಕ ವಿಧಿಸಿ ಆದೇಶ ಹೊರಡಿಸಿದೆ.
ಪ್ರಸ್ತುತ ಧ್ವನಿವರ್ಧಕ (Amplified Sound System)ಪರವಾನಿಗೆ ಶುಲ್ಕಗಳನ್ನು 1 ದಿನದ ಅವಧಿಗೆ ರೂ.15, 1 ರಿಂದ 31 ದಿನಗಳ ಅವಧಿಗೆ ರೂ. 75 ಹಾಗೂ 1 ತಿಂಗಳ ಅವಧಿಗೆ ರೂ. 450 ಶುಲ್ಕ ವಿಧಿಲಾಗುತ್ತಿದೆ. ಸರ್ಕಾರ ಶಬ್ದ ಮಾಲಿನ್ಯ (ಪ್ರತಿಬಂಧಕ ಹಾಗೂ ನಿಯಂತ್ರಣ) ನಿಯಮ 2000ಅನ್ನು ಅನುಷ್ಠಾನಗೊಳಿಸುತ್ತಾ, ರಾಜ್ಯಾದ್ಯಂತ ಧ್ವನಿವರ್ಧಕ ಬಳಕೆ ಬಗ್ಗೆ ಸುಪ್ರೀಂ ಕೋರ್ಟ್ ಆದೇಶ ಅನುಷ್ಠಾನಗೊಳಿಸಲು ನಿರ್ದೇಶನ ನೀಡಿದೆ.
ಈ ಕಾನೂನಿನ ಪ್ರಕಾರ ಧ್ವನಿವರ್ಧಕಗಳ ಬಳಕೆಗೆ ಎರಡು ವರ್ಷಗಳ ಅವಧಿವರೆಗೆ ಪರವಾನಿಗೆ ನೀಡಬಹುದಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಪರಿಷ್ಕೃತ ಆದೇಶ ಹೊರಡಿಸಿ ಒಂದು ತಿಂಗಳಿಗಿಂತ ಮೇಲ್ಪಟ್ಟ ಕಾಲಾವಧಿಗೆ ನೀಡಲಾಗುವ ಎಲ್ಲಾ ಪರವಾನಿಗೆಗಳಿಗೆ ಒಟ್ಟಾರೆ ಶುಲ್ಕ ರೂ.450 ನಿಗದಿ ಪಡಿಸಿದೆ.
ಇದನ್ನೂ ಓದಿ: ತೆರಿಗೆ ರಿಜಿಸ್ಟ್ರಾರ್ ತಿದ್ದುಪಡಿ: ನಗರಸಭೆ ಸಿಬ್ಬಂದಿ ವಿರುದ್ಧ ಕ್ರಿಮಿನಲ್ ಕೇಸ್ ಹಾಕಲು ಡಿಸಿ ಸೂಚನೆ