ಹಾವೇರಿ: ಗೋ ಹತ್ಯೆ ನಿಷೇಧ ಕಾಯ್ದೆ ತರಬೇಕಾ ಬೇಡವಾ ಎಂಬ ವಿಷಯವನ್ನ ರೈತರಿಗೆ ಬಿಟ್ಟುಬಿಡಿ ಎಂದು ರೈತಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಅವರು ಅಭಿಪ್ರಾಯಪಟ್ಟಿದ್ದಾರೆ. ಹಾವೇರಿಯಲ್ಲಿ ಮಾತನಾಡಿದ ಅವರು, ರೈತರನ್ನ ಮನೆಹಾಳರನ್ನಾಗಿ ಮಾಡುವ ಕಾನೂನು ಇದ್ದರೇನು? ಬಿಟ್ಟರೇನು? ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ರೀತಿಯ ಗೋ ಹತ್ಯೆ ನಿಷೇಧ ಕಾನೂನು ಮಾಡುವ ಸರ್ಕಾರಗಳಿಗೆ, ವ್ಯಕ್ತಿಗಳಿಗೆ ಸಾಮಾನ್ಯ ಜ್ಞಾನ ಇರಬೇಕು. ಯಾವ ಹಸು ಗೋಶಾಲೆಗೆ ಹೋಗಬೇಕು, ಯಾವ ಹಸು ಕಸಾಯಿಖಾನೆಗೆ ಹೋಗಬೇಕು ಎನ್ನುವ ಕುರಿತಂತೆ ತಿಳಿವಳಿಕೆ ಇರಬೇಕು ಎಂದು ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಅಭಿಪ್ರಾಯಪಟ್ಟಿದ್ದಾರೆ. ಹಾವೇರಿಯಲ್ಲಿ ಮಾತನಾಡಿದ ಅವರು, ಗೋ ಹತ್ಯೆ ನಿಷೇಧ ಎಂಬುವ ಪದ ಬಹಳ ಭಾವನಾತ್ಮಕವಾದುದು. ಇದನ್ನ ಬ್ಲಾಕ್ ಮೇಲ್ ಎಂತಲೂ ಕರೆಯುತ್ತೇವೆ ಎಂದು ತಿಳಿಸಿದರು.
ಗೋ ಹತ್ಯೆ ನಿಷೇಧ ರೈತನಿಗೆ ಸಂಬಂಧಪಟ್ಟ ವಿಷಯ. ಸರ್ಕಾರ ಈ ಕುರಿತಂತೆ ಏಕಾಏಕಿ ನಿರ್ಧಾರಗಳನ್ನ ತೆಗೆದುಕೊಳ್ಳಬಾರದು. ಗೋ ಹತ್ಯೆ ನಿಷೇಧ ಕಾಯ್ದೆ ವಾಪಸ್ ತೆಗೆದುಕೊಳ್ಳಬಾರದು ಎಂದು ಕೆಲ ಮಠಾಧೀಶರು ಸಹ ಸಿಎಂಗೆ ಮನವಿ ಮಾಡಿದ್ದಾರೆ. ಹೈನುಗಾರಿಕೆಗೆ ಅಂತಾ ತೆಗೆದುಕೊಂಡು ಹೋಗುವ ಹಸುಗಳನ್ನ ಹಿಂದೂ ಸಂಘಟನೆ, ಬಜರಂಗದಳ ಸಂಘಟನೆ ಸದಸ್ಯರು ತಡೆಯುತ್ತಾರೆ. ಅಲ್ಲಿಗೆ ಪೊಲೀಸರು ಬರುತ್ತಾರೆ. ಲಾರಿ ಸೀಜ್ ಆಗುತ್ತೆ. ಚಾಲಕ ಅರೆಸ್ಟ್ ಆಗುತ್ತಾರೆ. ಹಸುಗಳನ್ನ ಗೋಶಾಲೆಗಳಿಗೆ ಕಳುಹಿಸಲಾಗುತ್ತದೆ. ಇದೊಂದು ರೀತಿಯ ವರ್ತುಲ ಇದ್ದಂತೆ. ನಂತರ ಮೂರ್ನಾಲ್ಕು ತಿಂಗಳಾದ ನಂತರ ಹಸುಗಳು ರೈತರಿಗೆ ಸಿಕ್ಕಾಗ ಅವು ಮೊದಲಿನಂತೆ ಇರುವುದಿಲ್ಲ ಎಂದು ತಿಳಿಸಿದರು.
ಸಂಘಟನೆಗಳ ಸದಸ್ಯರಿಗೆ ಮೊದಲೇ ತಿಳಿದಿರುತ್ತೆ: ಜಾನುವಾರು ಮಾರುಕಟ್ಟೆಯಲ್ಲಿ ಹಸು ತೆಗೆದುಕೊಂಡವರ ಬಗ್ಗೆ ಹಾಗೂ ಎಲ್ಲಿಗೆ ಸಾಗಿಸಲಾಗುತ್ತದೆ ಎಂಬುವುದು ಈ ಸಂಘಟನೆಗಳ ಸದಸ್ಯರಿಗೆ ಮೊದಲೇ ತಿಳಿದಿರುತ್ತೆ ಎಂದು ಅವರು ಆರೋಪಿಸಿದರು. ಮೂರು ಕೃಷಿ ಕಾಯ್ದೆ ತಂದಿರುವ ಉದ್ದೇಶವೇ ಕಾರ್ಪೋರೇಟ್ ಕಂಪನಿಗಳನ್ನ ಕೃಷಿ ವಲಯಕ್ಕೆ ತರುವುದಾಗಿದೆ ಎಂದು ಕೋಡಿಹಳ್ಳಿ ಆರೋಪಿಸಿದರು.
ಕೃಷಿ ಮಾರುಕಟ್ಟೆಯನ್ನ, ಕೃಷಿಭೂಮಿಯನ್ನ, ಹೈನುಗಾರಿಕೆಯನ್ನ ರೈತನ ಕೈಯಿಂದ ತಪ್ಪಿಸಿ ಕಾರ್ಪೋರೇಟ್ ಕಂಪನಿಗಳನ್ನ ಕರೆತರಲು ಸರ್ಕಾರಗಳು ಈ ರೀತಿಯ ಪೀಠಿಕೆ ಹಾಕುತ್ತಿವೆ ಎಂದು ಕೋಡಿಹಳ್ಳಿ ಆರೋಪಿಸಿದರು. ಹೈನುಗಾರಿಕೆ ರೈತನ ಕೈಯಲ್ಲಿಯೇ ಇರಬೇಕು, ಇಲ್ಲದಿದ್ದರೆ ರೈತರು ಬೇರೆ ರೀತಿಯ ಹೋರಾಟಕ್ಕೆ ಇಳಿಯಬೇಕಾಗುತ್ತದೆ ಎಂದು ಕೋಡಿಹಳ್ಳಿ ಎಚ್ಚರಿಕೆ ನೀಡಿದರು.
ಲೋಕಸಭೆ ಚುನಾವಣೆಯಲ್ಲಿ ತಕ್ಕಪಾಠ ಕಲಿಸುತ್ತೇವೆ: ಸಿಎಂ ಸಿದ್ದರಾಮಯ್ಯ ಭೂಸ್ವಾಧೀನ ಕಾಯ್ದೆಗೆ ತಿದ್ದುಪಡಿ ತರದಿದ್ದರೆ ಲೋಕಸಭೆ ಚುನಾವಣೆಯಲ್ಲಿ ತಕ್ಕಪಾಠ ಕಲಿಸುತ್ತೇವೆ. ಕಾಂಗ್ರೆಸ್ ಸರ್ಕಾರ ಬರಲು ಕೇವಲ ಸಿದ್ದರಾಮಯ್ಯ, ಡಿ ಕೆ ಶಿವಕುಮಾರ್ ಮಾತ್ರ ಕಾರಣರಲ್ಲ, ನಾವೂ ಕಾರಣ. ನಮ್ಮ ಬದುಕು ರಕ್ಷಣೆ ಮಾಡಿಕೊಳ್ಳಲು ನಾವು ಮತ ಹಾಕಿದ್ದೇವೆ. ನೀವು ನಮ್ಮನ್ನ ಕಾಪಾಡದೇ ನಡುನೀರಲ್ಲಿ ಕೈಬಿಡುತ್ತೇನೆ ಅಂದರೆ ನಾವು ಬೇರೆ ತೀರ್ಮಾನ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಸಾರಿಗೆ ಇಲಾಖೆ ನೌಕರರ ನ್ಯಾಯಯುತ ಬೇಡಿಕೆ ಹೋರಾಟಕ್ಕೆ ನನಗೆ ಸಾರಿಗೆ ಇಲಾಖೆಯ ಒಳಗಿನ ವ್ಯಕ್ತಿಗಳು ಸೇರಿಕೊಂಡು ಅಪಮಾನ ಮಾಡುವ ವ್ಯವಸ್ಥೆ ಮಾಡಿದರು. ಈಗ ಮತ್ತೆ ಸಾರಿಗೆ ಇಲಾಖೆಗಳ ಕೆಲ ವ್ಯಕ್ತಿಗಳು ನಮ್ಮನ್ನ ಸಂಪರ್ಕಿಸುತ್ತಿದ್ದಾರೆ. ಸಾರಿಗೆ ಇಲಾಖೆಯ ನೌಕರರು ಒತ್ತಾಯಿಸಿದರೆ ಮತ್ತೆ ಅವರ ಬೇಡಿಕೆಗಳ ಹೋರಾಟಕ್ಕೆ ಬೆಂಬಲ ನೀಡುವುದಾಗಿ ಕೋಡಿಹಳ್ಳಿ ತಿಳಿಸಿದರು.
ಇದನ್ನೂ ಓದಿ: ಗೋ ಹತ್ಯೆ ಸರಿಯಲ್ಲ, ಕಾನೂನಿನ ಲೋಪದೋಷ ಸರಿಪಡಿಸಲಿ: ಕುರುಬೂರು ಶಾಂತಕುಮಾರ್