ಹಾವೇರಿ: ಜಿಲ್ಲೆಯ ಹಾನಗಲ್ ತಾಲೂಕಿನ ಬಮ್ಮನಹಳ್ಳಿ ಸರ್ಕಾರಿ ಪ್ರೌಢಶಾಲೆ ಶಾಲೆಯಲ್ಲಿ ಶಿಕ್ಷಕಿಯರಿಬ್ಬರು ಸಹ ಶಿಕ್ಷಕನ ಮೇಲೆ ಕಿರುಕುಳದ ಆರೋಪ ಮಾಡಿದ್ದಾರೆ. ಸಹ ಶಿಕ್ಷಕರೊಬ್ಬರು ತಮ್ಮೊಂದಿಗೆ ಅನುಚಿತವಾಗಿ ವರ್ತಿಸುತ್ತಿದ್ದಾರೆ. ನಮ್ಮನ್ನು ನೋಡುವ ದೃಷ್ಠಿಕೋನವೇ ಬೇರೆ ರೀತಿ ಇರುತ್ತೆ. ಇಷ್ಟು ದಿನ ನಾನು ಸ್ವೆಟರ್ ಹಾಕಿಕೊಂಡು ಬರುತ್ತಿರಲಿಲ್ಲ, ಸಿದ್ದಪ್ಪ ಜೋಗಿ ನೋಡುವ ರೀತಿ ಸರಿಯಿಲ್ಲದ ಕಾರಣ ನಾನು ಸ್ವೆಟರ್ ಹಾಕಿಕೊಂಡು ಬರುತ್ತಿದ್ದೇನೆ ಎನ್ನುವ ಗಂಭೀರ ಆರೋಪ ಮಾಡಿದ್ದಾರೆ.
ತಾವು ಮುಖ್ಯ ಶಿಕ್ಷಕಿಯಾದರೂ ಸರಿಯಾಗಿ ಗೌರವ ನೀಡುವುದಿಲ್ಲ. ಇಲ್ಲಸಲ್ಲದ ನೆಪ ಮಾಡಿಕೊಂಡು ನನ್ನ ಕ್ಯಾಬೀನ್‌ಗೆ ಬರುತ್ತಾರೆ. ಈ ಕುರಿತಂತೆ ಕೇಳಿದರೆ ಕುಂಟು ನೆಪ ಹೇಳುತ್ತಾರೆ. ಇದರಿಂದ ರೋಸಿ ಹೋಗಿದ್ದು ನಾನು ಆತ್ಮಹತ್ಯೆ ಮಾಡಿಕೊಳ್ಳಲೂ ಮುಂದಾಗಿದ್ದೆ ಎಂದು ಅಳಲು ತೋಡಿಕೊಂಡಿದ್ದಾರೆ.
ಮತ್ತೋರ್ವ ಶಿಕ್ಷಕಿ ಪ್ರತಿಕ್ರಿಯಿಸಿ, ಆ ಶಿಕ್ಷಕ ದೂರವಾಣಿ ಕರೆ ಮೂಲಕ ಲೈಂಗಿಕ ಕಿರಕುಳ ನೀಡುತ್ತಿದ್ದಾರೆ. ಎದುರಿಗೆ ಸಿಕ್ಕಾಗಲೆಲ್ಲ ಅಶ್ಲೀಲ ಪದ ಬಳಕೆ ಮಾಡುತ್ತಾರೆ. ನಮ್ಮ ಕುಟುಂಬದಲ್ಲಿ ಜಗಳ ತಂದು ನೆಮ್ಮದಿಯನ್ನೇ ಹಾಳು ಮಾಡಿದ್ದಾರೆ. ಇವರಿಂದಾಗಿ ನಮ್ಮ ಕುಟುಂಬ ಹಾಳಾಗಿದ್ದು, ನನಗೆ ಈಗ ಬಿ.ಪಿ.,ಶುಗರ್ ಹೆಚ್ಚಾಗಿದೆ. ಈ ಘಟನೆಯಿಂದ ಖಿನ್ನತೆ ಕಾಣಿಸಿಕೊಂಡಿದ್ದು, ನನ್ನನ್ನು ಜಿಲ್ಲೆಗೆ ವರ್ಗಾವಣೆ ಮಾಡಿ ಎನ್ನುತ್ತಿದ್ದಾರೆ.
ನಾನೇನು ಮಾಡಿಲ್ಲ.. ತಪ್ಪು ಮಾಡಿದ್ದು ಸಾಬೀತು ಮಾಡಿದರೆ ಶಿಕ್ಷೆ ವಿಧಿಸಲಿ: ಆ ಶಿಕ್ಷಕಿಯರು ತಮ್ಮ ಮೇಲೆ ಆರೋಪ ಮಾಡಲು ಅವರಿಗೆ ಬುದ್ದಿ ಹೇಳಿದ್ದೇ ಕಾರಣ. ಅವರಿಬ್ಬರು ನನಗೆ ತಾಯಿ ಸಮಾನ, ಅವರನ್ನ ನನ್ನ ಸಹೋದರಿಯರಂತೆ ಕಾಣುತ್ತಿದ್ದೇನೆ. ಆದರೆ, ಅವರಿಗೆ ಸರಿಯಾಗಿ ಕೆಲಸ ಮಾಡಿ ಎಂದು ಹೇಳಿದ್ದೇ ತಪ್ಪಾಯಿತು. ತಪ್ಪು ಮಾಡಿರುವುದನ್ನ ಸಾಬೀತು ಮಾಡಿದರೆ ಅವರು ನೀಡುವ ಶಿಕ್ಷೆ ಎದುರಿಸಲು ನಾನು ಸಿದ್ಧ ಎನ್ನುತ್ತಿದ್ದಾರೆ ಸಿದ್ದಪ್ಪ.
ಶಿಕ್ಷಕಿ- ಶಿಕ್ಷಕರ ನಡುವಿನ ಜಗಳದಿಂದ ಶಾಲೆಯ ಶೈಕ್ಷಣಿಕ ಮಟ್ಟ ಹದಗೆಟ್ಟಿದೆ ಎಂದು ಪೋಷಕರು ಆರೋಪಿಸಿದ್ದಾರೆ. ಇದೀಗ ಶಾಲೆಯ ಈ ಗಲಾಟೆ ಡಿಡಿಪಿಐ ಕಚೇರಿ ತಲುಪಿದ್ದು, ಡಿಡಿಪಿಐ ಜಗದೀಶ್ ಶಿಕ್ಷಕರ ಆರೋಪ ಪ್ರತ್ಯಾರೋಪಕ್ಕೆ ಯಾವ ರೀತಿ ಕ್ರಮ ಕೈಗೊಳ್ಳುತ್ತಾರೆ ಎಂಬುದನ್ನ ಕಾದು ನೋಡಬೇಕಿದೆ.
ಇದನ್ನೂ ಓದಿ : ಕಲಬುರಗಿ: ಶನಿವಾರ ಶಾಲಾ - ಕಾಲೇಜುಗಳಿಗೆ ರಜೆ