ರಾಣೆಬೆನ್ನೂರ: ಊರಿನ ಸ್ಮಶಾನಕ್ಕೆ ಸರಿಯಾದ ದಾರಿಯಿಲ್ಲದ ಕಾರಣ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಶವವನ್ನು ಭತ್ತದ ಗದ್ದೆಯಲ್ಲಿ ಸಾಗಿಸಿರುವ ಘಟನೆ ತಾಲೂಕಿನ ಹೊಳೆಆನ್ವೇರಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಬಸಪ್ಪ ಫಕ್ಕಿರಪ್ಪ ಪೂಜಾರ (65) ಎಂಬ ವ್ಯಕ್ತಿ ಅನಾರೋಗ್ಯದಿಂದ ಭಾನುವಾರ ಮೃತಪಟ್ಟಿದ್ದರು. ಸ್ಮಶಾನಕ್ಕೆ ಸರಿಯಾದ ದಾರಿ ಇಲ್ಲದೇ ಇದ್ದುದರಿಂದ ಜನರು ಭತ್ತದ ಗದ್ದೆಯ ಮೂಲಕವೇ ಶವ ಹೊತ್ತು ಸಾಗಿದರು. ಹೀಗೆ ಸಾಗುವಾಗ, ಶವದ ಜೊತೆಗೆ ಜನರು ಗದ್ದೆಯಲ್ಲಿ ಬಿದ್ದ ಉದಾಹರಣೆಗಳೂ ಇಲ್ಲಿವೆ.
ಐವತ್ತು ವರ್ಷ ಕಳೆದರೂ ಸ್ಮಶಾನಕ್ಕೆ ದಾರಿ ಮಾಡದ ಜನಪ್ರತಿನಿಧಿಗಳು:
ಹೊಳೆಆನ್ವೇರಿ ಗ್ರಾಮದಲ್ಲಿ ಸುಮಾರು 5 ಸಾವಿರ ಜನರು ವಾಸಿಸುತ್ತಿದ್ದಾರೆ. ಈ ಗ್ರಾಮದಲ್ಲಿ ಎಲ್ಲಾ ಸಮುದಾಯಗಳ ಜನರಿಗಾಗಿ ಸ್ಮಶಾನ ವ್ಯವಸ್ಥೆ ಕಲ್ಪಿಸಲಾಗಿದೆ. ಆದರೆ, ಈ ಸ್ಮಶಾನಕ್ಕೆ ಐದು ದಶಕಗಳಿಂದ ಸರಿಯಾದ ರಸ್ತೆ ಇಲ್ಲ. ಗ್ರಾಮಸ್ಥರು ಭತ್ತದ ಗದ್ದೆಗಳಲ್ಲಿ ಶವ ಹೊತ್ತುಕೊಂಡು ಹೋಗಬೇಕಿದೆ. ಮಳೆಗಾಲದ ಸಮಯದಲ್ಲಿ ಗ್ರಾಮದಲ್ಲಿ ಯಾರಾದರೂ ಮೃತಪಟ್ಟರೆ ಅಂತ್ಯ ಸಂಸ್ಕಾರ ಮಾಡುವುದು ದೊಡ್ಡ ಕಷ್ಟ ಎನ್ನುತ್ತಾರೆ ಗ್ರಾಮಸ್ಥರು.
ಇದನ್ನೂ ಓದಿ: ಸಾರ್ವಜನಿಕ ಗಣೇಶೋತ್ಸವ ಆಚರಣೆಗೆ ರಾಜ್ಯ ಸರ್ಕಾರ ಅನುಮತಿ: ಆದ್ರೆ, ಕಂಡಿಷನ್ಸ್ ಅಪ್ಲೈ