ರಾಣೆಬೆನ್ನೂರು : ಉತ್ತರ ಭಾರತದಲ್ಲಿ ಗಂಗಾ ನದಿಗೆ ಗಂಗಾರತಿ ಮಾಡಲಾಗುತ್ತದೆ. ಅದೇ ರೀತಿ ದಕ್ಷಿಣ ಭಾರತದಲ್ಲಿ ತುಂಗಭದ್ರಾ ನದಿಗೆ ತುಂಗಾರತಿ ಮಾಡಲು ಫೆ.28ರಂದು ಪುಣ್ಯಕೋಟಿ ಮಠ ಸಜ್ಜಾಗಿದೆ. ರಾಣೆಬೆನ್ನೂರು ನಗರದಿಂದ 18 ಕಿ.ಮೀ ದೂರವಿರುವ ಕೋಡಿಯಾಲ ಹೊಸಪೇಟೆಯ ತುಂಗಭದ್ರಾ ನದಿಯ ದಡದ ಮೇಲೆ ನಿಂತಿರುವ ತಪೋಕ್ಷೇತ್ರ ಪುಣ್ಯಕೋಟಿ ಮಠದಲ್ಲಿ ತುಂಗಾರತಿ ಕಾರ್ಯಕ್ರಮ ನಡೆಯಲಿದೆ.
ಭೂಮಾತೆ, ಗೋಮಾತೆ, ಗಂಗಾಮಾತೆ ಸ್ಮರಿಸುವಂತಹ ನಿಸರ್ಗ ಮಾತೆಯನ್ನು ಗೌರವಿಸುವಂತಹ ಒಂದು ಕಾರ್ಯಕ್ರಮ ಇದಾಗಿದೆ. ಉತ್ತರ ಭಾರತದ ಹರಿದ್ವಾರ, ಋಷಿಕೇಶ, ಕಾಶಿ ಕ್ಷೇತ್ರಗಳಲ್ಲಿ ಐತಿಹಾಸಿಕ ಗಂಗಾನದಿಗೆ ಗಂಗಾರತಿ ಮೂಲಕ ಪೂಜಿಸಲಾಗುತ್ತದೆ.
ಅದರಂತೆ ದಕ್ಷಿಣ ಭಾರತದಲ್ಲಿ ಹರಿಯುವ ನದಿಗಳಲ್ಲಿ ಯಾವುದೇ ಆರತಿ ಬೆಳಗುತ್ತಿಲ್ಲ. ಈ ಹಿನ್ನೆಲೆ ಕೋಡಿಯಾಲ ಹೊಸಪೇಟೆ ಕ್ಷೇತ್ರದಲ್ಲಿ ಉತ್ತಾರಭಿಮುಖವಾಗಿ ಹರಿಯುತ್ತಿರುವ ತುಂಗಭದ್ರಾ ನದಿಗೆ ತುಂಗಾರತಿ ಮಾಡಲಾಗುತ್ತದೆ ಎಂದು ಪೂಜ್ಯಶ್ರೀ ಬಾಲಯೋಗಿ ಜಗದೀಶ್ವರ ಅಪ್ಪಾಜಿ ಹೇಳಿದ್ದಾರೆ.
ಓದಿ:ಸಂತೆಯಲ್ಲಿ ಕಳ್ಳರ ಹಾವಳಿ: ನೂರಾರು ಮೊಬೈಲ್ ಕಳ್ಳತನವಾದ್ರೂ ಪೊಲೀಸ್ ಇಲಾಖೆ ನಿರ್ಲಕ್ಷ್ಯ?
ಶ್ರೀಕ್ಷೇತ್ರದಲ್ಲಿ ಫೆ.27ರಂದು ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಕಾಶಿ ಜಗದ್ಗುರುಗಳು ಕಾರ್ಯಕ್ರಮಕ್ಕೆ ವಿಧ್ಯುಕ್ತವಾಗಿ ಚಾಲನೆ ನೀಡಲಿದ್ದಾರೆ. ಆದಿಚುಂಚನಗಿರಿ ಶ್ರೀಗಳು ಹಾಗೂ ವಾಲ್ಮೀಕಿ ಗುರುಪೀಠದ ಶ್ರೀಗಳು ಫೆ. 28ರಂದು ತುಂಗಭದ್ರಾ ನದಿಯ ತೀರದಲ್ಲಿ ನಡೆಯುವ ಗಂಗಾರತಿ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಕರ್ನಾಟಕ ಸರ್ಕಾರದ ಉಪಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳ, ಅಶ್ವತ್ಥ್ ನಾರಯಣ ಸೇರಿ ನಾಡಿನ ಪ್ರಮುಖ ರಾಜಕೀಯ ನಾಯಕರು ಭಾಗಿಯಾಗಲಿದ್ದಾರೆ.