ಹಾವೇರಿ: ದಾಸ ಸಾಹಿತ್ಯಕ್ಕೆ ಅತ್ಯುತ್ತಮ ಕೊಡುಗೆ ನೀಡಿದ ತತ್ವಜ್ಞಾನಿ ಶ್ರೀ ಕನಕದಾಸರ 536ನೇ ಜಯಂತಿ. ಸಮಾಜದ ಒಳಿತಿಗಾಗಿ ಸಾಮಾಜಿಕ ಕ್ರಾಂತಿಯನ್ನು ಮಾಡಿದ ಕನಕದಾಸರ ಜಯಂತಿಯನ್ನು ಇಂದು ರಾಜ್ಯದೆಲ್ಲೆಡೆ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಜಾತಿ, ಮತ ಮತ್ತು ಸಮಾಜದ ಪಿಡುಗುಗಳ ಬಗ್ಗೆ ಜನ ಸಾಮಾನ್ಯರಿಗೆ ಅರ್ಥವಾಗುವ ಭಾಷೆಯಲ್ಲಿ ಹೇಳುತ್ತ, ಸಮಾಜ ಹಾಗೂ ದಾಸಸಾಹಿತ್ಯ ಕ್ಷೇತ್ರಕ್ಕೆ ತಮ್ಮದೇ ಆದ ಸೇವೆ ಸಲ್ಲಿಸಿದವರು ಕನಕದಾಸರು.
ಆ ಕಾಲದ ಹರಿದಾಸರ ಪೈಕಿ ದಾಸ ಸಾಹಿತ್ಯಕ್ಕೆ ಗಣನೀಯ ಕೊಡುಗೆ ನೀಡಿದ ದಾಸಶ್ರೇಷ್ಠ ಕನಕದಾಸರು ಜನಿಸಿದ್ದು ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಬಾಡ ಗ್ರಾಮದಲ್ಲಿ. ಬೀರಪ್ಪ ಮತ್ತು ಬಚ್ಚಮ್ಮ ದಂಪತಿಯ ಮಗನಾಗಿ ಜನಿಸಿದ್ದ ಕನಕದಾಸರ ಮೂಲ ಹೆಸರು ತಿಮ್ಮಪ್ಪ ನಾಯಕ. ಈ ತಿಮ್ಮಪ್ಪ ನಾಯಕ ಕನಕನಾಗಿದ್ದು ನಂತರ, ಕನಕದಾಸನಾಗಿದ್ದು ಈಗ ಇತಿಹಾಸ.
ಶಿಗ್ಗಾಂವಿ ತಾಲೂಕಿನ ಬಾಡ ಗ್ರಾಮ ಕನಕದಾಸರ ಜನ್ಮಭೂಮಿಯಾದರೆ, ಬ್ಯಾಡಗಿ ತಾಲೂಕಿನ ಕಾಗಿನೆಲೆ ಕನಕದಾಸರ ಕರ್ಮಭೂಮಿ. ವಿಜಯನಗರ ಅರಸರ ಆಡಳಿತದಲ್ಲಿ ದಂಡನಾಯಕನಾಗಿದ್ದ ತಿಮ್ಮಪ್ಪ ನಾಯಕನಿಗೆ ಚಿನ್ನ ಸಿಕ್ಕಿದ್ದರಿಂದ ಕನಕನಾಗುತ್ತಾನೆ. ನಂತರ ಯುದ್ಧದಲ್ಲಿ ಪಾಲ್ಗೊಂಡು ಅಲ್ಲಿ ಕಂಡ ಹಿಂಸೆಯಿಂದ ಕನಕ ಕನಕದಾಸರಾಗುತ್ತಾರೆ ಎಂದು ಇತಿಹಾಸ ಹೇಳುತ್ತದೆ.
ಕನಕದಾಸರು ಮತ್ತು ಪುರಂದರದಾಸರನ್ನು ಕರ್ನಾಟಕ ಕೀರ್ತನೆ ಸಾಹಿತ್ಯದ ಅಶ್ವಿನಿ ದೇವತೆಗಳೆಂದು ಕರೆಯಲಾಗುತ್ತದೆ. ಸಾಹಿತ್ಯದ ಜೊತೆಗೆ ಸಂಗೀತಕ್ಕೂ ಒತ್ತುಕೊಟ್ಟ ಉಭಯ ಸಂತರು ದಾಸ ಪರಂಪರೆಯಲ್ಲಿ ಅಜರಾಮರರಾಗಿ ಉಳಿದವರು. ಅದರಲ್ಲಿ ಕನಕದಾಸರು ನಾಡು ಕಂಡ ಅಪ್ರತಿಮ ದಾಸರಾಗಿದ್ದು ದಾಸಶ್ರೇಷ್ಠರಲ್ಲಿ ಶ್ರೇಷ್ಠರಾದವರು ಎಂದೆನಿಸಿಕೊಂಡವರು. ಇಂತಹ ಕನಕದಾಸರು ಇಂದಿನ ವಿದ್ಯಮಾನಗಳನ್ನು ಐದು ಶತಮಾನಗಳ ಮುಂಚೆ ತಮ್ಮ ಕೃತಿಗಳಲ್ಲಿ ಪ್ರಸ್ತುತಪಡಿಸಿದ್ದು ಅವರ ಕಾಲಜ್ಞಾನಕ್ಕೆ ಹಿಡಿದ ಕನ್ನಡಿ.
ಅವರು ರಚಿಸಿದ ಕೃತಿಗಳು ಅಂದು ಸಮಾಜದ ಅಂಕುಡೊಂಕುಗಳನ್ನು ತಿದ್ದಿದ್ದಲ್ಲದೆ ಪ್ರಸ್ತುತ ದಿನಗಳಲ್ಲಿಯೂ ಸಹ ಸಮಾಜದ ಸಾಮಾಜಿಕ ಜಾಗೃತಿಗೆ ಪ್ರಮುಖ ಪಾತ್ರ ವಹಿಸುತ್ತವೆ. 1509 ರಲ್ಲಿ ಜನಿಸಿದ್ದ ಕನಕದಾಸರು 1609 ರಲ್ಲಿ ಕಾಗಿನೆಲೆಯಲ್ಲಿ ಇಹಲೋಕ ತ್ಯಜಿಸಿದರು. ಸಮಾಜದ ಒಳಿತಿಗಾಗಿ ಅವರು ಮಾಡಿದ ಸೇವೆ ಕಂಡು ಕಾಗಿನೆಲೆಯಲ್ಲಿ ಅವರ ಗದ್ದುಗೆ ಕೂಡ ನಿರ್ಮಿಸಲಾಗಿದೆ. ಅಂದು ಕನಕದಾಸರು ರಚಿಸಿದ ನಳಚರಿತ್ರೆ, ಮೋಹನತರಂಗಿಣಿ, ರಾಮಧಾನ್ಯ ಚರಿತ ಮತ್ತು ಹರಿಭಕ್ತಿಸಾರ ಕೃತಿಗಳು ಕನ್ನಡ ಸಾಹಿತ್ಯದ ಶ್ರೇಷ್ಠ ಕೃತಿಗಳಾಗಿವೆ. ಅವರು ಕಾಗಿನೆಲೆ ಆಧಿಕೇಶವನ ಅಂಕಿತನಾಮದಲ್ಲಿ ರಚಿಸಿದ ಕೀರ್ತನೆಗಳು ಇಂದಿಗೂ ಜನಮಾನಸದಲ್ಲಿ ಅಚ್ಚಳಿಯದೇ ಉಳಿದಿವೆ.
ಸರ್ಕಾರ ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರ ರಚಿಸಿದ್ದು ಪ್ರಾಧಿಕಾರ ಕನಕದಾಸರ ಜೀವನಗಾಥೆ ಸಾರುವ ಸ್ಮಾರಕಗಳನ್ನ ರಕ್ಷಿಸುತ್ತಿದೆ. ಕನಕದಾಸ ಜೀವನಕ್ಕೆ ಸಂಬಂಧಿಸಿದ ಸ್ಥಳಗಳಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದೆ. ಕನಕದಾಸರ ಜನ್ಮಭೂಮಿ ಬಾಡ ಮತ್ತು ಕರ್ಮಭೂಮಿ ಕಾಗಿನೆಲೆಯಲ್ಲಿ ಅಭಿವೃದ್ಧಿ ಮಂತ್ರ ಜಪಿಸುತ್ತಿದೆ. ಬಾಡದಲ್ಲಿ ಕನಕದಾಸರ ಅರಮನೆ ನಿರ್ಮಾಣವಾಗಿದ್ದರೆ, ಕಾಗಿನೆಲೆಯಲ್ಲಿ ಪರಿಸರ ಉದ್ಯಾನವನ, ಕಾಗಿನೆಲೆ ದ್ವಾರಗೋಪುರ, ಕನಕದಾಸರ ಗದ್ದುಗೆ ಕನಕ ಚೆನ್ನಕೇಶವ ದೇವಸ್ಥಾನ ಸ್ಥಾಪನೆ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದೆ. ಕಾಗಿನೆಲೆ ಮತ್ತು ಬಾಡ ಗ್ರಾಮಗಳನ್ನು ಪ್ರವಾಸಿತಾಣವಾಗಿಸಲು ಪ್ರಾಧಿಕಾರ ಶ್ರಮಿಸುತ್ತಿದೆ. ಸೌಹಾರ್ದತೆ, ಸಮಾನತೆ, ಆಧ್ಯಾತ್ಮಿಕ ಸಾಧನೆಗಳ ಬಗ್ಗೆ ಕನಕದಾಸರ ತತ್ವೋಪದೇಶಗಳು ಬದುಕಿಗೆ ದಾರಿದೀಪ ಅನ್ನೋದರಲ್ಲಿ ಎರಡು ಮಾತಿಲ್ಲ.
ಇದನ್ನೂ ಓದಿ: ಬಿಸಿಲ ನಗರಿಯಲ್ಲಿ ಸಂಭ್ರಮದ ಕನಕದಾಸ ಜಯಂತಿ: ಡೊಳ್ಳು ಕುಣಿತದ - ವಿಡಿಯೋ ನೋಡಿ