ಹಾವೇರಿ: ಸಿಎಂ ಬಸವರಾಜ ಬೊಮ್ಮಾಯಿಗೆ ಸೋಲಿನ ರುಚಿ ತೋರಿಸಲು ಕಾಂಗ್ರೆಸ್ ಕಸರತ್ತು ನಡೆಸಿದೆ. ಈ ಮಧ್ಯೆ ಬೊಮ್ಮಾಯಿ ನಿರೀಕ್ಷೆ ಮಾಡದ ವ್ಯಕ್ತಿಯೊಬ್ಬರು ಇದೀಗ ಅವರ ವಿರುದ್ಧ ಸ್ಪರ್ಧೆಗೆ ಇಳಿದಿದ್ದಾರೆ. ಇವರ ಹೆಸರು ಕೆ.ಪದ್ಮರಾಜನ್. ತಮಿಳುನಾಡು ಮೂಲದವರು. ದೇಶದಲ್ಲಿಯೇ ಅತಿಹೆಚ್ಚು ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಇವರೀಗ ಸಿಎಂ ವಿರುದ್ಧ ಸ್ಪರ್ಧಿಸಲು ಶಿಗ್ಗಾಂವಿ ಕ್ಷೇತ್ರದಲ್ಲಿ ಸ್ಪರ್ಧೆಗೆ ಇಳಿದಿದ್ದಾರೆ.
ಈ ಕುರಿತಂತೆ ಗುರುವಾರ ಶಿಗ್ಗಾಂವಿ ಚುನಾವಣಾಧಿಕಾರಿಗೆ ನಾಮಪತ್ರ ಸಲ್ಲಿಸಿದ್ದಾರೆ. ಕೆ.ಪದ್ಮರಾಜನ್‌ಗೆ ಈ ರೀತಿಯ ಘಟಾನುಘಟಿಗಳ ಜೊತೆ ಸ್ಪರ್ಧಿಗಿಳಿಯುವುದು ವಿಶೇಷವೇನಿಲ್ಲ. ಇವರು ಇಲ್ಲಿಯವರೆಗೆ ಸುಮಾರು 233 ಚುನಾವಣೆಗಳಲ್ಲಿ ಸ್ಪರ್ಧಿಸಿದ್ದಾರೆ.
ತಮಿಳುನಾಡು ರಾಜ್ಯದ ಸೇಲಂ ಜಿಲ್ಲೆಯ ಮೆಟ್ಟೂರು ಮೂಲದ ಪದ್ಮರಾಜ್ ಮೂಲತ: ಟೈಯರ್ ವ್ಯಾಪಾರಿ. ದೇಶದ ವಿವಿಧ ರಾಜ್ಯಗಳಲ್ಲಿ ನಡೆದಿರುವ ಚುನಾವಣೆಗಳಲ್ಲಿ ಪದ್ಮರಾಜನ್ ಸ್ಪರ್ಧಿಸುವ ಮೂಲಕ ಬಹುತೇಕ ಚುನಾವಣೆಗಳನ್ನು ಎದುರಿಸಿದ್ದಾರೆ. ಕೆ. ಪದ್ಮರಾಜನ್ ಈಗಾಗಲೇ ಸಿಎಂ ಬೊಮ್ಮಾಯಿ ವಿರುದ್ದ ನಾಮಪತ್ರ ಸಲ್ಲಿಸಿದ್ದಾರೆ. ಈ ಮೊದಲು ಅವರು ಮಾಜಿ ಪ್ರಧಾನಿ ದಿವಂಗತ ಅಟಿಲ್ ಬಿಹಾರಿ ವಾಜಪೇಯಿ, ಕಾಂಗ್ರೆಸ್‌ನ ರಾಹುಲ್ ಗಾಂಧಿ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ತಮಿಳುನಾಡಿನ ಸಿಎಂಗಳಾದ ಕರುಣಾನಿಧಿ, ಜಯಲಲಿತಾ ವಿರುದ್ಧವೂ ಸ್ಪರ್ಧಿಸಿದ್ದಾರೆ.
ಎಲ್ಲ ಚುನಾವಣೆಯಲ್ಲಿಯೂ ಸೋಲು : ಬಿ.ಎಸ್.ಯಡಿಯೂರಪ್ಪ, ಬಂಗಾರಪ್ಪ, ಎಸ್.ಎಂ.ಕೃಷ್ಣ ಮತ್ತು ವಿಜಯಮಲ್ಯ ವಿರುದ್ದ ಸಹ ಇವರು ನಾಮಪತ್ರ ಸಲ್ಲಿಸಿದ್ದರು. 1988 ರಲ್ಲಿ ಆರಂಭವಾದ ಇವರ ಚುನಾವಣೆಗೆ ಸ್ಪರ್ಧಿಸುವ ಹಾದಿ ಇದೀಗ 234 ನೇ ಸ್ಪರ್ಧೆವರೆಗೂ ಬಂದು ನಿಂತಿದೆ. ಆರಂಭದಲ್ಲಿ ತಮಿಳುನಾಡಿನಲ್ಲಿ ಮಾತ್ರ ಸ್ಪರ್ಧೆಗೆ ಇಳಿಯುತ್ತಿದ್ದ ಪದ್ಮರಾಜನ್ ಇದೀಗ ದೇಶದ ವಿವಿಧೆಡೆ ಸೇರಿದಂತೆ ಕರ್ನಾಟಕದಲ್ಲಿ ಸಹ ಸಿಎಂ ಬೊಮ್ಮಾಯಿ ವಿರುದ್ಧ ಸ್ಪರ್ಧೆಗೆ ಮುಂದಾಗಿದ್ದಾರೆ. ಇವರು ಯಾವೊಂದು ಚುನಾವಣೆಯಲ್ಲಿಯೂ ಜಯಗಳಿಸಿಲ್ಲ. ಅಷ್ಟೇ ಅಲ್ಲ ಎಲ್ಲ ಚುನಾವಣೆಯಲ್ಲಿಯೂ ಠೇವಣಿ ಕಳೆದುಕೊಂಡಿದ್ದಾರೆ.
ಈ ರೀತಿ ಠೇವಣಿ ರೂಪದಲ್ಲಿಯೇ ಇವರು ಕೋಟಿ ರೂಪಾಯಿ ಕಳೆದುಕೊಂಡಿದ್ದಾರೆ. ಭಾರತ ಪ್ರಜಾಪ್ರಭುತ್ವದ ಅತ್ಯಂತ ವಿಫಲ ಅಭ್ಯರ್ಥಿ ಎಂಬ ಕುಖ್ಯಾತಿಗೆ ಸಹ ಕೆ ಪದ್ಮರಾಜನ್ ಪಾತ್ರರಾಗಿದ್ದಾರೆ. ಪದ್ಮರಾಜನ್ ಚುನಾವಣೆಗೆ ಸ್ಪರ್ಧಿಸುವ ವಿಚಾರದಲ್ಲಿಯೇ ಲಿಮ್ಕಾ ಬುಕ್ ಆಫ್ ರೆಕಾರ್ಡ್ ಮಾಡಿದ್ದಾರೆ. ಕಳೆದ ಬಾರಿ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನ ರಾಹುಲ್ ಗಾಂಧಿ ವಿರುದ್ದ ಸ್ಪರ್ಧಿಸಿದ್ದರು. ಕೆ.ಪದ್ಮರಾಜನ್‌ಗೆ ಪದ್ಮರಾಜನಗೆ ಪತ್ನಿ ಮತ್ತು ಪುತ್ರನಿದ್ದು ಮಗ ಎಂಬಿಎ ಪದವೀಧರನಾಗಿದ್ದಾನೆ. ಮೆಟ್ಟೂರಿನ ಡಿಜಿಟಲ್ ಸೇವಾ ಕೇಂದ್ರದಲ್ಲಿ ಮಗ ಕೆಲಸ ಮಾಡುತ್ತಿದ್ದು, ಪದ್ಮರಾಜನ್ ಟೈಯರ್ ವ್ಯಾಪಾರದ ಜೊತೆ ಹೋಮಿಯೋಪತಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಈ ರೀತಿ ಘಟಾನುಘಟಿಗಳ ವಿರುದ್ಧ ಸ್ಪರ್ಧಿಸಿ ಲಿಮ್ಕಾ ರಿಕಾರ್ಡ್ ಮಾಡಿರುವ ಕೆ. ಪದ್ಮರಾಜನ್ ಇದೀಗ ಹಾವೇರಿ ಜಿಲ್ಲೆ ಶಿಗ್ಗಾಂವಿ ಕ್ಷೇತ್ರದಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ ವಿರುದ್ದ ಸ್ಪರ್ಧಿಸಲಿದ್ದಾರೆ. ಆದರೆ, ಈ ಕುರಿತಂತೆ ಹಾವೇರಿ ಜಿಲ್ಲಾಧಿಕಾರಿ ರಘುನಂದನಮೂರ್ತಿ ಹೇಳುವುದೇ ಬೇರೆ. ಪದ್ಮರಾಜನ್ ನಾಮಪತ್ರ ಸಲ್ಲಿಸುವುದಕ್ಕೂ ಅಭ್ಯರ್ಥಿ ಆಗುವುದಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಅವರು ಬಹುತೇಕ ಚುನಾವಣೆಯಲ್ಲಿ ನಾಮಪತ್ರ ಸಲ್ಲಿಸಿರಬಹುದು. ಆದರೆ ಅಭ್ಯರ್ಥಿಯಾಗಿಲ್ಲ ಎಂದು ಜಿಲ್ಲಾಧಿಕಾರಿ ರಘುನಂದನ ತಿಳಿಸಿದ್ದಾರೆ.
ಅವರ ನಾಮಪತ್ರ ತಿರಸ್ಕೃತವಾಗಬಹುದು - ಡಿಸಿ ರಘುನಂದನ: ಅವರು ಎಲ್ಲಿ ಮತದಾರರಾಗಿರುತ್ತಾರೋ ಈ ಕ್ಷೇತ್ರದಲ್ಲಿ ಮಾತ್ರ ಸ್ಪರ್ಧಿಸಲು ಸಾಧ್ಯ. ಅಲ್ಲದೇ ಇವರ ಸ್ಪರ್ಧೆಗೆ ಸ್ಥಳೀಯ 10 ಜನರು ಪ್ರಪೋಸಲ್ ಸಲ್ಲಿಸಬೇಕು. ಕೆ. ಪದ್ಮರಾಜನ್ ಜೊತೆ ಸ್ಥಳೀಯವಾಗಿ ಯಾರು ಪ್ರಪೋಸಲ್ ಸಲ್ಲಿಸಿಲ್ಲ. ಹೀಗಾಗಿ ಅವರ ನಾಮಪತ್ರ ತಿರಸ್ಕೃತವಾಗಬಹುದು ಎಂದು ಹಾವೇರಿ ಜಿಲ್ಲಾಧಿಕಾರಿ ರಘುನಂದನ ಮೂರ್ತಿ ತಿಳಿಸಿದ್ದಾರೆ.
ಇದನ್ನೂ ಓದಿ : ಜಗದೀಶ್ ಶೆಟ್ಟರ್‌ಗೆ ಟಿಕೆಟ್ ನೀಡದ ಅಸಮಾಧಾನ; 16 ಪಾಲಿಕೆ ಸದಸ್ಯರ ರಾಜೀನಾಮೆ