ಹಾವೇರಿ: ಜಿಲ್ಲೆಯಲ್ಲಿ ಜೆಎನ್ 1 ಉಪತಳಿ, ಕೊರೊನಾ ವೈರಸ್ ತಡೆಗೆ ಹಾವೇರಿ ಜಿಲ್ಲಾಡಳಿತ ಸಕಲ ಸಿದ್ದತೆ ಮಾಡಿಕೊಂಡಿದೆ ಎಂದು ಹಾವೇರಿ ಜಿಲ್ಲಾಧಿಕಾರಿ ರಘುನಂದಮೂರ್ತಿ ತಿಳಿಸಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಒಬ್ಬರಿಗೆ ಮಾತ್ರ ಕೊರೊನಾ ವೈರಸ್ ಕಾಣಿಸಿ ಕೊಂಡಿದೆ. ಅದು ಸಹ ಶಿವಮೊಗ್ಗ ಜಿಲ್ಲೆಯಲ್ಲಿ ತಪಾಸಣೆ ನಡೆಸಿದಾಗ ಈ ಪಾಸಿಟಿವ್ ಪ್ರಕರಣ ಪತ್ತೆಯಾಗಿತ್ತು. ಆದರೆ ಹಾವೇರಿ ಜಿಲ್ಲೆಯಲ್ಲಿ ಇದುವರೆಗೆ ನಡೆಸಲಾದ ತಪಾಸಣೆಗಳಲ್ಲಿ ಒಂದು ಜೆಎನ್ 1 ವೈರಸ್ ಪತ್ತೆಯಾಗಿಲ್ಲ ಎಂದು ಜಿಲ್ಲಾಧಿಕಾರಿ ರಘುನಂದನಮೂರ್ತಿ ತಿಳಿಸಿದರು.
ಹಿರೇಕೆರೂರು ತಾಲೂಕಿನ ಒಬ್ಬ ವೃದ್ಧೆಗೆ ಕೊರೊನಾ ಕಾಣಿಸಿಕೊಂಡ ನಂತರ ಅವರ ಮನೆಯಲ್ಲಿ ಸಹ ತಪಾಸಣೆ ನಡೆಸಲಾಗಿದೆ. ಐದು ಜನರ ವರದಿ ನೆಗೆಟಿವ್ ಬಂದಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು. ಸರ್ಕಾರ ಹಾವೇರಿ ಜಿಲ್ಲೆಗೆ ಪ್ರತಿನಿತ್ಯ 70 ತಪಾಸಣೆ ನಡೆಸುವಂತೆ ಸೂಚಿಸಿದೆ. ಆದರೆ ನಾವು 150 ಕ್ಕೂ ಅಧಿಕ ತಪಾಸಣೆ ನಡೆಸುತ್ತಿದ್ದೇವೆ. ಜಿಲ್ಲೆಯಲ್ಲಿ ಇದು ವರೆಗೆ 1444 ಜನರಲ್ಲಿ ಕೊರೊನಾ ತಪಾಸಣೆ ನಡೆಸಲಾಗಿದೆ. ಇದರಲ್ಲಿ ಯಾವುದೇ ಪಾಸಿಟಿವ್ ಪ್ರಕರಣ ಕಾಣಿಸಿಕೊಂಡಿಲ್ಲ. ಜಿಲ್ಲೆಯಲ್ಲಿ ಕೊರೊನಾ ತಪಾಸಣೆಗೆ ಬೇಕಾಗುವ ಸಲಕರಣೆಗಳನ್ನು ಸರ್ಕಾರ ನಿಗದಿತ ಪ್ರಮಾಣದಲ್ಲಿ ಕಳಿಸಿಕೊಟ್ಟಿದೆ. ಕೊರೊನಾ ತಪಾಸಣೆಗೆ ಬೇಕಾಗುವ ಎಲ್ಲ ಸಾಮಗ್ರಿ ಜಿಲ್ಲಾಡಳಿತದ ಬಳಿ ಇವೆ ಎಂದು ಮಾಹಿತಿ ನೀಡಿದರು.
ಹಾವೇರಿ ಜಿಲ್ಲಾದ್ಯಂತ ಕೊರೊನಾ ಕಾಣಿಸಿಕೊಂಡರೆ ಸರ್ಕಾರಿ ಆಸ್ಪತ್ರೆಗಳಲ್ಲಿ 1024 ಬೆಡ್ ಮತ್ತು ಖಾಸಗಿ ಆಸ್ಪತ್ರಗಳಲ್ಲಿ 340 ಬೆಡ್ ಕಾಯ್ದಿರಿಸಲಾಗಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ 155 ಐಸಿಯು ಮತ್ತು ಖಾಸಗಿಯಾಗಿ 183 ಐಸಿಯು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.
ವೆಂಟಿಲೆಟರ್ ಇರುವ 65 ಮತ್ತು ಮಕ್ಕಳಿಗಾಗಿ ಎರಡು ಐಸಿಯುಗಳನ್ನು ಜಿಲ್ಲಾಡಳಿತ ಸಿದ್ಧ ಮಾಡಿಟ್ಟುಕೊಂಡಿದೆ. ಜಿಲ್ಲೆಯಲ್ಲಿ ಸುಮಾರು ಆಮ್ಲಜನಕ ಪೂರೈಸುವ 600 ಕಾನ್ಸಂಟ್ರೇಟ್‌ಗಳು ಮತ್ತು 995 ಸಿಲಿಂಡರ್‌ಗಳನ್ನು ಸಿದ್ದವಾಗಿಸಿ ಇಟ್ಟುಕೊಂಡಿದೆ. ಈ ಹಿಂದೆ ಜಿಲ್ಲಾಸ್ಪತ್ರೆಯಲ್ಲಿ ಕಾಣಿಸಿಕೊಂಡಿದ್ದ ಒತ್ತಡ ಹೀನ ಆಮ್ಲಜನಕ ಪೂರೈಕೆಯ ಒತ್ತಡ ಹೆಚ್ಚು ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ವಿವರಿಸಿದರು.
ಕೊರೊನಾದಿಂದ ಜಿಲ್ಲೆಯ ಜನರು ಭಯಪಡುವ ಅವಶ್ಯಕತೆ ಇಲ್ಲಾ. ವಯೋವೃದ್ಧರು, ಮಧುಮೇಹ ರಕ್ತದೊತ್ತಡ ಸೇರಿದಂತೆ ವಿವಿಧ ಸಮಸ್ಯೆಗಳಿರುವವರು ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು. ಜಿಲ್ಲೆಯಲ್ಲಿ ಹೀಗಾಗಲೇ ಸರ್ಕಾರ 700 ಕ್ಕೂ ಅಧಿಕ ಕೊರೊನಾ ವ್ಯಾಕ್ಸಿನ್‌ಗಳನ್ನ ಪೂರೈಸಿದೆ. ಈ ವ್ಯಾಕ್ಸಿನ್‌ಗಳ ಖಾಲಿಯಾಗುತ್ತಿದ್ದಂತೆ ಜಿಲ್ಲೆಗೆ ಬೇಕಾಗುವ ವ್ಯಾಕ್ಸಿನ್ಗಳನ್ನು ಸರ್ಕಾರ ಪೂರೈಸಲಿದೆ ಎಂದು ಜಿಲ್ಲಾಧಿಕಾರಿ ರಘುನಂದನಮೂರ್ತಿ ತಿಳಿಸಿದರು.
ಹಾವೇರಿಜಿಲ್ಲಾಸ್ಪತ್ರೆ ಸೇರಿದಂತೆ ಎಲ್ಲ ತಾಲೂಕಾಸ್ಪತ್ರೆಗಳಲ್ಲಿ ಆಮ್ಲಜನಕ ಉತ್ಪಾದಿಸುವ ಘಟಕಗಳನ್ನು ಸಿದ್ದವಾಗಿಟ್ಟುಕೊಳ್ಳಲಾಗಿದೆ. ಸಾರ್ವಜನಿಕರು ಯಾವುದೇ ಭಯಕ್ಕೆ ಒಳಗಾಗದೇ ಕೊರೊನಾ ಲಕ್ಷಣಗಳ ಕಾಣಿಸಿಕೊಂಡರೇ ಕೊರೊನಾ ಪರೀಕ್ಷೆಗೆ ಮಾಡಿಸಿಕೊಳ್ಳಬೇಕು. ಬೂಸ್ಟರ್ ಡೋಸ್ ವ್ಯಾಕ್ಸಿನ್ ಪಡೆಯದ ವಯೋವೃದ್ದರು ಹತ್ತೀರದ ಸರ್ಕಾರಿ ಆಸ್ಪತ್ರೆಗೆ ತೆರಳಿ ಬೂಸ್ಟರ್ ಡೋಸ್ ಹಾಕಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ರಘುನಂದನಮೂರ್ತಿ ಸಲಹೆ ನೀಡಿದರು.
ಇದನ್ನೂಓದಿ:ಹಾವೇರಿ: ಮಹಿಳೆಗೆ ಕೊರೊನಾ ರೂಪಾಂತರಿ JN.1 ದೃಢ