ಹಾವೇರಿ: ಈ ಹಿಂದೆ ರಾಜ್ಯದಲ್ಲಿ ದೈವಾನುಗ್ರಹದಿಂದ ಮುಖ್ಯಮಂತ್ರಿಯಾಗಿ ಉತ್ತಮ ಆಡಳಿತ ನಡೆಸಿದ್ದೇನೆ. ಸಿಎಂ ಆಗಿದ್ದ ಸಂದರ್ಭದಲ್ಲಿ ಹಲವು ಜನಪರ ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದೆ. ಗ್ರಾಮ ವಾಸ್ತವ್ಯದ ಮೂಲಕ ಲಕ್ಷಾಂತರ ಕುಟುಂಬಗಳಿಗೆ ನೆರವು ನೀಡಿದ್ದೇನೆ. ಈ ಬಾರಿ ಜೆಡಿಎಸ್ ಪಕ್ಷಕ್ಕೆ ಆಶೀರ್ವಾದ ಮಾಡುತ್ತೇವೆ ಅಂತ ಪ್ರತಿ ಗ್ರಾಮದಲ್ಲಿ ಹೇಳ್ತಿದ್ದಾರೆ ಎನ್ನುವ ಮೂಲಕ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಜಯ ಗಳಿಸುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು.
ರಾಣೆಬೆನ್ನೂರಿನಲ್ಲಿ ನಡೆದ ಪಂಚರತ್ನ ಯಾತ್ರೆ ಸಮಾವೇಶದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದ ಪ್ರಜಾಧ್ವನಿ ಯಾತ್ರೆಯು ಪ್ರಜೆಗಳ ಧ್ವನಿಯಾಗುವುದಕ್ಕಿಂದ ಬಿಜೆಪಿ ನಾಯಕರನ್ನು ಟೀಕೆ ಮಾಡುವ ಧ್ವನಿಯಾಗಿದೆ. ಈಗಾಗಲೇ ಹಲವು ಜಿಲ್ಲೆಗಳಲ್ಲಿ ಪ್ರವಾಸ ಮಾಡಿದ್ದೇನೆ. ಕೆಲ ಹಳ್ಳಿಗಳಲ್ಲಿ ಜನರ ಬದುಕು ನೋಡಿ ಭಾರಿ ಬೇಸರವಾಯಿತು. ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳಾದರೂ ಸರಿಯಾದ ರಸ್ತೆ ವ್ಯವಸ್ಥೆಯಿಲ್ಲ. ಶಾಲೆ ಕಟ್ಟಡಗಳಲ್ಲಿ ಶೌಚಾಲಯಗಳಿಲ್ಲ. ಹತ್ತು ಹಲವು ಸಮಸ್ಯೆಗಳಿವೆ ಎಂದು ಹೆಚ್ ಡಿಕೆ ಹೇಳಿದರು.
ಪಂಚರತ್ನ ಯೋಜನೆಗಳನ್ನು ಯಾಕೆ ಜಾರಿಗೆ ತರಬೇಕು ಎನ್ನುವುದಕ್ಕೆ ಒಂದು ಉದಾಹರಣೆ ಕೊಡುತ್ತೇನೆ. ಮೊನ್ನೆ ನಾನು ನವಲಗುಂದ ಕ್ಷೇತ್ರದ ಹೆಬಸೂರು ಗ್ರಾಮದಲ್ಲಿ ವಾಸ್ತವ್ಯ ಹೂಡಿದ್ದೆ. ಅಲ್ಲಿ ಹಾವೇರಿ ಬಳಿಯ ಸಂಗೂರು ಗ್ರಾಮದ ಬಡ ಕುಟುಂಬವೊಂದು ಕಾಯುತ್ತ ಇತ್ತು. ಆ ಕುಟುಂಬದ ಯುವಕನಿಗೆ ಅಪಘಾತವಾಗಿ ಮನೆಯಲ್ಲಿ ಮಲಗಿದ್ದಾನೆ. ಯುವಕನ ಸ್ಪೈನಲ್ ಕಾರ್ಡ್ ಡ್ಯಾಮೇಜ್ ಆಗಿದೆ. ಆಯುರ್ವೇದ ಚಿಕಿತ್ಸೆ ಕೊಡಿಸಲು ಹಣ ಬೇಕಾಗಿದೆ ಅಂತ ಬಡ ಕುಟುಂಬ ಸಹಾಯ ಕೇಳಿಕೊಂಡು ಬಂದಿತ್ತು. ನಿಮ್ಮ ಜಿಲ್ಲೆಯವರೇ ಸಿಎಂ, ಅವರನ್ನು ಭೇಟಿಯಾಗಲು ಆಗಲಿಲ್ಲವಾ? ಅಂದ್ರೆ, ಸಾಧ್ಯವಾಗಲಿಲ್ಲ ಎಂದರು. ಇಂತಹ ಕುಟುಂಬಗಳಿಗೆ ಏನು ಮಾಡಬೇಕು ಅಂತ ನಾನು ಪ್ರತಿ ಕ್ಷಣ ಯೋಚನೆ ಮಾಡ್ತೇನೆ. ಮುಂದಿನ ಮೂರು ತಿಂಗಳು ತಡೆಯಿರಿ. ಜನರ ಆಶೀರ್ವಾದದಿಂದ ನಾನು ಮುಖ್ಯಮಂತ್ರಿಯಾದರೆ ಖಂಡಿತವಾಗಿ ಮತ್ತೆ ಮನೆ ಕೊಡಿಸುತ್ತೇನೆ ಎಂದು ಮಾತು ಕೊಟ್ಟಿದ್ದೇನೆ. 25,000 ಹಣ ಕೊಟ್ಟು ಧೈರ್ಯ ಹೇಳಿದ್ದೇನೆ ಎಂದರು.
ಇದನ್ನೂ ಓದಿ: ರಾಜ್ಯ ಮತ್ತು ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಇದೆ: ಹೆಚ್.ಡಿ.ಕುಮಾರಸ್ವಾಮಿ
ಕುಮಾರಸ್ವಾಮಿ ಎಲ್ಲಿ ಮುಖ್ಯಮಂತ್ರಿ ಆಗುತ್ತಾನೆ?, ಸಾಲ ಮನ್ನಾ ಮಾಡ್ತಾನಾ? ಅಂತ ಕಾಂಗ್ರೆಸ್ ಮತ್ತು ಬಿಜೆಪಿಯವರು ಮಾತಾಡಿದ್ರು. ಅಂದು 26 ಲಕ್ಷ ಕುಟುಂಬಗಳ ಸಾಲ ಮನ್ನಾ ಮಾಡಿದೆ. ಆದರೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು 2 ಲಕ್ಷ ರೂಪಾಯಿ ಕೂಡ ರೈತರ ಸಾಲ ಮನ್ನಾ ಮಾಡಲಿಲ್ಲ. ನರೇಂದ್ರ ಮೋದಿ ಮತ್ತು ಅಮಿತ್ ಶಾ ಎರಡು ಬಾರಿ ಕಲಬುರಗಿಗೆ ಬಂದರೂ ಒಂದು ದಿನವೂ ರೈತರ ಜೊತೆ ಇದ್ದೇವೆ ಅಂತ ಮಾತನಾಡಲಿಲ್ಲ. ಇಂತಹ ಪಕ್ಷಗಳನ್ನು ನೀವು ನಂಬ್ತಿರಾ? ಎಂದು ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
ಇದನ್ನೂ ಓದಿ: ಬಿಜೆಪಿ ಪರವಾಗಿ ಸಿದ್ದರಾಮಯ್ಯ ಸುಪಾರಿ ತೆಗೆದುಕೊಂಡಿದ್ದಾರೆ: ಹೆಚ್ ಡಿ ಕುಮಾರಸ್ವಾಮಿ
ಮಾಜಿ ಸಚಿವ ಆರ್ ಶಂಕರ್ಗೆ ಹೆಚ್ಡಿಕೆ ಟಾಂಗ್: ಮುಗ್ಧ ಜನ ಇಲ್ಲಿನ ಶಾಸಕರನ್ನು ಗೆಲ್ಲಿಸಿದ್ದರು. ನಮ್ಮ ಪಕ್ಷದ ಕೋಟಾದಲ್ಲಿ ಅವರನ್ನು ಮಂತ್ರಿ ಮಾಡಿದ್ದೇವು. ಸಿದ್ದರಾಮಯ್ಯನವರು ಅವರನ್ನು ಮಂತ್ರಿ ಮಾಡಿ ಅಂದರು. ಆದ್ರೆ, ಸಚಿವರಾದ ಮೇಲೆ ಕದ್ದು ಬಿಜೆಪಿಗೆ ಹೋದರು. ಆದರೆ ಈಗ ಏನಾಗಿದೆ?, ಶಾಸಕ ಸ್ಥಾನವೂ ಇಲ್ಲ, ಮಂತ್ರಿ ಸ್ಥಾನವೂ ಇಲ್ಲ. ಜಲ ಮಿಷನ್ ಯೋಜನೆ ಹಣ ನುಂಗಿ ನೀರು ಕುಡಿಯುತ್ತಿದ್ದಾರೆ. ನದಿಗಳ ನೀರಿನ ಸಂಪೂರ್ಣ ಉಪಯೋಗಕ್ಕೆ ಜನತಾ ಜಲಧಾರೆ ಯೋಜನೆ ತರಬೇಕೆಂದಿದ್ದೇನೆ ಎಂದರು.