ಹಾವೇರಿ : ಜಾನಪದ ವಿಶ್ವವಿದ್ಯಾಲಯಕ್ಕೆ ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳ ತಾಯಿಯಾಗುವ ಸಾಧ್ಯತೆ ಮತ್ತು ಅವಕಾಶ ಇದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸಂಸ್ಥಾಪಕ ಡಾ ಎಂ.ಮೋಹನ್ ಆಳ್ವ ಅಭಿಪ್ರಾಯಪಟ್ಟಿದ್ದಾರೆ.
ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಗೋಟಗೊಡಿ ಜಾನಪದ ವಿವಿಯ 6 ಮತ್ತು 7 ನೇ ಘಟಿಕೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಜಾನಪದದಲ್ಲಿ ಜ್ಞಾನವು ಇದೇ ಸೌಂದರ್ಯವು ಇದೆ. ಇದನ್ನು ತಂತ್ರಜ್ಞಾನದೊಂದಿಗೆ ಹೇಗೆ ಬಿಂಬಿಸಬೇಕು ಎಂಬುವುದನ್ನು ಯೋಚಿಸಬೇಕಿದೆ. ತತ್ವಜ್ಞಾನದೊಂದಿಗೆ ತಂತ್ರಜ್ಞಾನ ಬೆಸೆಯುವ ದೊಡ್ಡ ಸವಾಲು ಜಾನಪದ ವಿವಿಗಿದೆ. ಇದಕ್ಕೆ ರಾಷ್ಟ್ರೀಯ ಶಿಕ್ಷಣ ನೀತಿ ಹೆಚ್ಚು ಒತ್ತು ನೀಡುತ್ತದೆ ಎಂದು ಮೋಹನ್ ಆಳ್ವ ಹೇಳಿದರು.
ಘಟಿಕೋತ್ಸವದ ನಿಮಿತ್ತ ವಿವಿಯ ಆಡಳಿತ ಕಚೇರಿಯಿಂದ ಘಟಿಕೋತ್ಸವ ನಡೆಯುವ ಹಿರೇತಿಟ್ಟು ಬಯಲು ರಂಗಮಂದಿರದವರೆಗೆ ಅತಿಥಿಗಳನ್ನು ವಿಶೇಷವಾಗಿ ಬರಮಾಡಿಕೊಳ್ಳಲಾಯಿತು. ಕಾರ್ಯಕ್ರಮದಲ್ಲಿ ಜಾನಪದ ಕಲಾತಂಡಗಳ ಕಲಾಪ್ರದರ್ಶನ ಗಮನಸೆಳೆಯಿತು. ಜಕ್ಕಲಿಗೆ ಹಲಗೆ ಮೇಳ, ಪುರವಂತಿಕೆ, ಮಹಿಳೆಯರು ಡೊಳ್ಳುಕುಣಿತ,ಕಾಡುಜನರ ಕುಣಿತಗಳು ಗಮನಸೆಳೆದವು.
6 ಮತ್ತು 7 ನೇ ಘಟಿಕೋತ್ಸವ ಸೇರಿ ಆರು ಜನ ಸಾಧಕರಿಗೆ ಜಾನಪದ ವಿವಿಯಿಂದ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಾಯಿತು. ಜಾನಪದ ವಿವಿ ಕುಲಪತಿ ಟಿ.ಎಂ.ಭಾಸ್ಕರ್ ಸಾಧಕರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದರು. ಜಾನಪದ ವಿವಿಯಲ್ಲಿ ಪ್ರಸ್ತುತ ವರ್ಷ ಏಳು ಸಂಶೋಧನಾ ವಿದ್ಯಾರ್ಥಿಗಳಿಗೆ ಡಾಕ್ಟರೇಟ್ ಪದವಿ ಪ್ರಧಾನ ಮಾಡಲಾಯಿತು. ಚಿನ್ನದ ಪದಕ ವಿಜೇತ ಐದು ವಿದ್ಯಾರ್ಥಿಗಳಿಗೆ ಪದಕ ವಿತರಿಸಿ ಗೌರವಿಸಲಾಯಿತು.
ಇದನ್ನೂ ಓದಿ : ಜಾನಪದ ವಿವಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ವರ್ಗಾವಣೆ ಆಗಲಿ: ಕಾರಜೋಳ