ಹಾವೇರಿ: ಜಿಲ್ಲೆಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಗೆ ನದಿಗಳು ತುಂಬಿ ಹರಿಯುತ್ತಿದ್ದು, ಹಾನಿ ಪೀಡಿತ ಪ್ರದೇಶಗಳಿಗೆ ಮಾಜಿ ಸಿಎಂ ಜಗದೀಶ ಶೆಟ್ಟರ್ ನೇತೃತ್ವದ ತಂಡ ಭೇಟಿ ನೀಡಿದೆ.
ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಮುತ್ತಳ್ಳಿ, ವರದಾ ಹಳ್ಳಿ ಹಾಗೂ ಹಾನಗಲ್ ತಾಲೂಕಿನ ಗ್ರಾಮಗಳಿಗೆ ಭೇಟಿ ನೀಡಿ ಮಾತನಾಡಿದ ಜಗದೀಶ್ ಶೆಟ್ಟರ್ ಅವರು, ಮೂವತ್ತು ವರ್ಷಗಳಲ್ಲಿ ಇಂತಹ ನೆರೆ ಹಾವಳಿ ಕಂಡಿರಲಿಲ್ಲ. ಸತತವಾಗಿ ಮಳೆ ಆಗುತ್ತಿರೋದನ್ನ ನೋಡಿರಲಿಲ್ಲ. ಹಾನಿಪೀಡಿತ ಪ್ರದೇಶಗಳಲ್ಲಿ ಈಗಾಗಲೇ ಪರಿಹಾರ ಕೇಂದ್ರಗಳನ್ನ ತೆರೆಯಲಾಗಿದೆ ಎಂದರು.
ಅಲ್ಲದೆ ಮನೆ ಮತ್ತು ಜಮೀನುಗಳಿಗೆ ನೀರು ನುಗ್ಗಿ ಸಾಕಷ್ಟು ಹಾನಿಯಾಗಿದೆ. ಸಿಎಂ ಯಡಿಯೂರಪ್ಪ ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪ್ರವಾಸ ಮಾಡುತ್ತಿದ್ದಾರೆ. ಅಧಿಕಾರಿಗಳು ಕೂಡ ಅಲರ್ಟ್ ಆಗಿ ಕೆಲಸ ಮಾಡುತ್ತಿದ್ದಾರೆ. ಮನೆ ಕಳೆದುಕೊಂಡವರಿಗೆ ತಕ್ಷಣ ಪರಿಹಾರ ಕೊಡುವ ಕೆಲಸ ಮಾಡುತ್ತಿದ್ದೇವೆ ಎಂದಿದ್ದಾರೆ.
ಇತ್ತ ವರದಾ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಳವಾಗಿದ್ದು, ಹಾನಗಲ್ ತಾಲೂಕಿನ ಶಾಡಗುಪ್ಪಿ, ವರ್ದಿ, ಹರವಿ ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ. ಗ್ರಾಮಗಳು ಸಂಪೂರ್ಣ ಜಲಾವೃತಗೊಂಡಿದ್ದು, ಸಾವಿರಾರು ಎಕರೆ ಪ್ರದೇಶದ ಬೆಳೆ ನೀರು ಪಾಲಾಗಿದೆ. ಪ್ರವಾಹ ಹೆಚ್ಚುತ್ತಿರುವ ಕಾರಣ ಅಗತ್ಯ ವಸ್ತುಗಳನ್ನ ತೆಗೆದುಕೊಂಡು ಗ್ರಾಮಸ್ಥರು ಸುರಕ್ಷಿತ ಸ್ಥಳಗಳಿಗೆ ತೆರಳುತ್ತಿದ್ದಾರೆ.