ಹಾವೇರಿ: ಕೊರೊನಾ ಸಂದರ್ಭದಲ್ಲಿ ಬಿಜೆಪಿ ಸರ್ಕಾರ ದುಡ್ಡು ಹೊಡೆದಿದೆ ಎಂದು ಕಾಂಗ್ರೆಸ್ ನಾಯಕರು ಹೇಳುತ್ತಿದ್ದಾರೆ. ಆದರೆ, ದೇಶದ ಇತರೆ ರಾಜ್ಯಗಳಿಗೆ ಹೋಲಿಸಿಕೊಂಡರೆ ನಮ್ಮಲ್ಲಿ ಕೊರೊನಾ ನಿಯಂತ್ರಣಕ್ಕೆ ಬಂದಿದೆ. ಬಿಜೆಪಿ ಸರ್ಕಾರ ಕೋವಿಡ್ ನಿಯಂತ್ರಣದಲ್ಲಿ ಯಶಸ್ವಿಯಾಗಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯನವರು ಯಾವಾಗ ತಾನೆ ನಮ್ಮ ಸರ್ಕಾರದ ಬಗ್ಗೆ ಒಳ್ಳೆಯದನ್ನು ಮಾತನಾಡಿದ್ದಾರೆ. ಅವರು ವಿರೋಧ ಪಕ್ಷದವರು, ವಿರೋಧ ಮಾಡೋದೇ ಅವರ ಕರ್ತವ್ಯ, ಹುಟ್ಟುಗುಣ ಎಂದರು.
ಕೊರೊನಾ ಸಂದರ್ಭ ಹಣ ಹೊಡೆದಿದ್ದಾರೆ ಅಂತಾರೆ. ಕೊರೊನಾ ಯಾವ ಮಟ್ಟದಲ್ಲಿತ್ತು, ಈಗ ಯಾವ ಮಟ್ಟಕ್ಕೆ ಬಂದಿದೆ. ಕೇರಳ, ಮಹಾರಾಷ್ಟ್ರದಲ್ಲಿ ಯಾವ ಮಟ್ಟದಲ್ಲಿದೆ. ನಮ್ಮ ರಾಜ್ಯದಲ್ಲಿ ಎಷ್ಟು ಕಂಟ್ರೋಲ್ ಆಗಿದೆ. ಯಡಿಯೂರಪ್ಪ ನೇತೃತ್ವದ ಸರ್ಕಾರ ಕೊರೊನಾ ನಿಯಂತ್ರಣ ಮಾಡೋ ಕೆಲಸ ಮಾಡಿದೆ ಎಂದರು.
ಯಡಿಯೂರಪ್ಪ ಹೆಸರಿಗೆ ಮಾತ್ರ ಸಿಎಂ ಎಂಬ ಹೆಚ್ಡಿಕೆ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಕುಮಾರಸ್ವಾಮಿ ಅವರ ಮಾತಿಗೆ ಬೆಲೆಯಿಲ್ಲ. ಅವರು ಒಮ್ಮೆ ಸಿಎಂ ಯಡಿಯೂರಪ್ಪನವರನ್ನ ಭೇಟಿ ಮಾಡ್ತಾರೆ. ಮತ್ತೆ ಮೈಸೂರು ಚುನಾವಣೆಗಾಗಿ ಕಾಂಗ್ರೆಸ್ನ ಡಿ.ಕೆ.ಶಿವಕುಮಾರ್ ಜೊತೆ ಸೇರ್ಕೋತಾರೆ. ಅವರು ಯಾವಾಗ ಏನು ಹೇಳ್ತಾರೆ ಅವರಿಗೇ ಗೊತ್ತಾಗೋದಿಲ್ಲ ಎಂದರು.