ಹಾವೇರಿ: ಹೊಸಪೇಟೆ ಜಿಲ್ಲಾ ಕೇಂದ್ರವಾಗಬೇಕು ಮತ್ತು ಜಿಂದಾಲ್‌ಗೆ ಭೂಮಿ ಪರಭಾರೆ ಮಾಡಬಾರದು ಎಂದು ಶಾಸಕ ಆನಂದ್ ಸಿಂಗ್ ರಾಜೀನಾಮೆ ನೀಡಿದ್ದಾರೆ. ಆದರೆ ರಮೇಶ್ ಜಾರಕಿಹೊಳಿ ಯಾವ ಉದ್ದೇಶಕ್ಕೆ ರಾಜೀನಾಮೆ ನೀಡಿದ್ದಾರೆ ಎಂಬುದು ನನಗೆ ಗೊತ್ತಿಲ್ಲ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವ ರಾಜಶೇಖರ್ ಪಾಟೀಲ್ ಹೇಳಿದ್ದಾರೆ.
ಹಾವೇರಿಯಲ್ಲಿ ಮಾತನಾಡಿದ ಅವರು, ಮೈತ್ರಿ ಸರ್ಕಾರ ರಚನೆ ಆದಾಗಿನಿಂದ ಇಲ್ಲಿಯವರೆಗೂ ರಾಜೀನಾಮೆ ಕೊಡ್ತೀವಿ ಅಂತಿದ್ರು. ಈಗ ಹೇಳಿದ ರೀತಿಯೇ ಮಾಡಿದ್ದಾರೆ. ಆದರೆ ಬೇರೆಯವರು ರಾಜೀನಾಮೆ ಕೊಡುವುದಿಲ್ಲ ಎಂದರು.
ಸಮ್ಮಿಶ್ರ ಸರ್ಕಾರ ಅಂದ ಮೇಲೆ ಅಸಮಾಧಾನ ಇದ್ದೇ ಇರುತ್ತದೆ. ಅಷ್ಟಕ್ಕೇ ಸರ್ಕಾರ ಬೀಳುವುವುದಿಲ್ಲ. ಉಭಯ ಪಕ್ಷಗಳಲ್ಲಿ ಹಿರಿಯ ನಾಯಕರಿದ್ದಾರೆ. ಅವರೇ ಎಲ್ಲವನ್ನು ಸರಿಪಡಿಸಲಿದ್ದಾರೆ. ಅತೃಪ್ತರನ್ನು ತೃಪ್ತಿಪಡಿಸಬೇಕೆಂದರೆ ಹಿರಿಯರಿಗೆ ನೀಡಿರುವ ಸಚಿವ ಸ್ಥಾನವನ್ನು ಪಡೆದು ಕಿರಿಯರಿಗೆ ನೀಡಬೇಕು. ಪಕ್ಷ ತೆಗೆದುಕೊಳ್ಳುವ ತೀರ್ಮಾನಕ್ಕೆ ತಾವು ಬದ್ಧವಾಗಿರುತ್ತೇವೆ ಎಂದರು.