ರಾಣೆಬೆನ್ನೂರು(ಹಾವೇರಿ): ಪೆಟ್ರೋಲ್ ಬಂಕ್ನಲ್ಲಿ ನಿಲ್ಲಿಸಿದ್ದ ಲಾರಿಯನ್ನು ಆ.24ರಂದು ಕಳವು ಮಾಡಿದ್ದ ಅಂತರ ರಾಜ್ಯ ಕಳ್ಳರನ್ನು ಬಂಧಿಸುವಲ್ಲಿ ಕುಮಾರಪಟ್ಟಣ ಪೊಲೀಸರು ಯಶಸ್ವಿಯಾಗಿದ್ದಾರೆ.
ಅಂತರರಾಜ್ಯ ಕಳ್ಳರ ಜಾಲದ ನಂಟು ಹೊಂದಿರುವ ಕನ್ಯಾಕುಮಾರಿ ಮೂಲದ ಟಿ.ಶೇಖರ್ ತಂಗರಾಜ (33) ಹಾಗೂ ಮನೋಜ್ ತಿರುಕಿ (33) ಬಂಧಿತ ಆರೋಪಿಗಳು. ರಾಣೆಬೆನ್ನೂರು ತಾಲೂಕಿನ ಕವಲೆತ್ತು ಗ್ರಾಮದಲ್ಲಿ ನಿಲ್ಲಿಸಿದ್ದ ಲಾರಿ ಕಳ್ಳತನ ಮಾಡಲಾಗಿತ್ತು. ಈ ಬಗ್ಗೆ ಲಾರಿ ಮಾಲೀಕ ಮಾಕನೂರು ಗ್ರಾಮದ ಹನುಮಂತಪ್ಪ ಮೆಡ್ಲೇರಿ ಕುಮಾರಪಟ್ಟಣ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣ ಬೆನ್ನತ್ತಿದ ಪೋಲಿಸರು ಆರೊಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಚಾಲಾಕಿ ಕಳ್ಳರು 19 ಲಕ್ಷ ರೂ. ಮೌಲ್ಯದ ಲಾರಿಯನ್ನು ಕಳವು ಮಾಡಿ ಸ್ಯಾಂಟ್ರೋ ಕಾರಿನ ನೋಂದಣಿ ಸಂಖ್ಯೆಯನ್ನು ಬದಲಿಸಿ ಹೊರರಾಜ್ಯಕ್ಕೆ ಸಾಗಿಸಿದ್ದರು. ದೇವಸ್ಥಾನದ ಸಿಸಿಟಿವಿ ಕ್ಯಾಮೆರಾ, ಹೆದ್ದಾರಿ ಟೋಲ್ ಹಾಗೂ ಅವರು ಸಂಪರ್ಕಿಸಿದ ಪೆಟ್ರೋಲ್ ಬಂಕ್ ಜಾಡು ಹಿಡಿದ ತನಿಖಾ ತಂಡ ಪ್ರಕರಣ ಬೇಧಿಸಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಈ ಪ್ರಕರಣವನ್ನು ಬೇಧಿಸುವಲ್ಲಿ ರಾಣೆಬೆನ್ನೂರು ಡಿವೈಎಸ್ಪಿ ಟಿ.ವಿ. ಸುರೇಶ, ಗ್ರಾಮೀಣ ಠಾಣೆ ಸಿಪಿಐ ಭಾಗ್ಯವತಿ ಬಂತಿ, ಕುಮಾರಪಟ್ಟಣ ಪಿಎಸ್ಐ ಅಣ್ಣಯ್ಯ. ಕೆ.ಟಿ ಇವರ ತಂಡ ಸಿಬ್ಬಂದಿ ಸಹಕಾರದಿಂದ ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಡಿವೈಎಸ್ಪಿ ಸುರೇಶ್ ಅಭಿನಂದನೆ ತಿಳಿಸಿದರು.