ಹಾವೇರಿ: ರಾಜ್ಯದಲ್ಲಿ ಅತಿಹೆಚ್ಚು ಬೆಳೆವಿಮೆ ಪಡೆಯುವ ಜಿಲ್ಲೆ ಹಾವೇರಿ. ಜಿಲ್ಲೆ ಕಳೆದ ವರ್ಷ ಸುಮಾರು 440 ಕೋಟಿ ರೂಪಾಯಿ ಬೆಳೆವಿಮೆ ಪಡೆದಿದೆ. ಪ್ರತಿವರ್ಷ ಇಲ್ಲಿಯ ರೈತರು ಬೆಳೆಗಳಿಗೆ ಬೆಳೆವಿಮೆ ಮಾಡಿಸುತ್ತಾರೆ. ಉತ್ತಮವಾಗಿ ಮಳೆ ಬಂದು ಬೆಳೆ ಬಂದರೆ ಬೆಳೆವಿಮೆ ಬರುವುದಿಲ್ಲ. ಆದರೆ, ಸರಿಯಾಗಿ ಮಳೆಬಾರದೆ ಬೆಳೆಬಾರದ ವರ್ಷಗಳಲ್ಲಿ ಬೆಳೆವಿಮೆ ಸ್ವಲ್ಪಮಟ್ಟಿನ ಸಹಾಯವಾಗುತ್ತೆ.
ಮುಂಗಾರು ಆರಂಭವಾಗುತ್ತಿದ್ದಂತೆ ಬೆಳೆವಿಮಾ ಕಂಪನಿಗಳು ಟೆಂಡರ್ ಹಾಕುವ ಮೂಲಕ ಬೆಳೆವಿಮೆಗೆ ಅವಕಾಶ ಮಾಡಿಕೊಡುತ್ತವೆ. ಆದರೆ, ಪ್ರಸ್ತುತ ವರ್ಷ ಹವಾಮಾನ ಆಧಾರಿತ ಬೆಳೆಗಳಿಗೆ ವಿಮೆ ಮಾಡಿಸಿಕೊಳ್ಳಲು ಯಾವುದೇ ಇನ್ಶೂರೆನ್ಸ್ ಕಂಪನಿಗಳು ಮುಂದೆ ಬಂದಿಲ್ಲ. ಈಗಾಗಲೇ ಮುಂಗಾರು ಮಳೆ ವಿಳಂಬದಿಂದ ಕೆಂಗಟ್ಟ ರೈತರಿಗೆ ಬೆಳೆವಿಮೆಗಳು ಟೆಂಡರ್ ಹಾಕಲು ಮುಂದೆ ಬರದಿರುವುದು ಮತ್ತಷ್ಟು ಆತಂಕಕ್ಕೆ ಸಿಲುಕಿಸಿದೆ.
ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನಲ್ಲಿ ಬೆಳೆದ ಅಡಕೆ, ಮಾವು, ಶುಂಠಿ ಸೇರಿ ಮೆಣಸಿನಕಾಯಿ ಬೆಳೆಗಳಿಗೆ ಹವಾಮಾನ ಆಧಾರಿತ ಬೆಳೆವಿಮೆ ಟೆಂಡರ್ ಹಾಕಲು ವಿಮಾ ಕಂಪನಿಗಳು ಮುಂದೆ ಬಂದಿಲ್ಲ. ಇದು ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಈ ಬಾರಿ ಮುಂಗಾರು ಮಳೆ ಸರಿಯಾದ ಪ್ರಮಾಣದಲ್ಲಿ ಆಗದೇ ಇರುವುದು ವಿಮಾ ಕಂಪನಿಗಳು ಹಿಂದೇಟು ಹಾಕುವುದಕ್ಕೆ ಕಾರಣ ಎಂದು ರೈತರು ಆರೋಪಿಸಿದ್ದಾರೆ.
ಅಧಿಕ ರೈತರಿಗೆ ವಿಮೆ ಹಣ ನೀಡಬೇಕಾಗುತ್ತೆ ಎನ್ನುವ ಕಾರಣಕ್ಕೆ ಬೆಳೆವಿಮಾ ಕಂಪನಿಗಳು ಟೆಂಡರ್ ಹಾಕಿಲ್ಲ. ಇದು ರೈತರಿಗೆ ಮಾಡಿದ ಅನ್ಯಾಯ ಎನ್ನುತ್ತಾರೆ ರೈತರು. ವಿಮೆ ಎಂದ ಮೇಲೆ ಒಮ್ಮೊಮ್ಮೆ ರೈತರಿಗೆ ಒಮ್ಮೊಮ್ಮೆ ವಿಮಾ ಕಂಪನಿಗಳಿಗೆ ಲಾಭವಾಗುತ್ತೆ. ವಿಮಾ ಕಟ್ಟಿದ ವರ್ಷ ಉತ್ತಮ ಮಳೆ ಬಂದರೆ ಕಂಪನಿಗಳಿಗೆ ಲಾಭವಾಗುತ್ತೆ. ಮಳೆ ಕೈಕೊಟ್ಟು ಬೆಳೆ ಬರದಿದ್ದಾಗ ರೈತರಿಗೆ ಸ್ವಲ್ಪಮಟ್ಟಿನ ಸಹಾಯವಾಗುತ್ತೆ. ಈ ವರ್ಷ ಮುಂಗಾರು ಮಳೆ ಮುನಿಸು ರೈತನಿಗೆ ಸಂಕಷ್ಟ ತಂದರೆ ಈಗ ವಿಮಾ ಕಂಪನಿಗಳು ಟೆಂಡರ್ ಹಾಕದಿರುವುದು ಜಿಲ್ಲೆಯ ಅನ್ನದಾತರಿಗೆ ಅನ್ಯಾಯವಾಗಿದೆ.
ಸರ್ಕಾರ ಹಾಗೂ ರೈತರ ಜೊತೆ ಚೆಲ್ಲಾಟ: ಮಾಜಿ ಸಚಿವ ದಿವಂಗತ ಸಿ.ಎಂ ಉದಾಸಿ ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನಲ್ಲಿ ಬೆಳೆ ವಿಮೆ ಕುರಿತಂತೆ ರೈತರಲ್ಲಿ ಜಾಗೃತಿ ಮೂಡಿಸಿದ್ದರು. ಅದರಂತೆ ಇಲ್ಲಿಯ ರೈತರು ರಾಜ್ಯದಲ್ಲಿ ಅತಿಹೆಚ್ಚು ಬೆಳೆವಿಮೆ ಪಡೆಯುತ್ತಿದ್ದಾರೆ. ಹಾನಗಲ್ ತಾಲೂಕು ರಾಜ್ಯದಲ್ಲಿ ಅತಿಹೆಚ್ಚು ಬೆಳೆವಿಮೆ ಪಡೆಯುವ ತಾಲೂಕಾಗಿದೆ. ಹಾನಗಲ್ ತಾಲೂಕಿನಲ್ಲಿ ಮಾವು, ಅಡಕೆ ಹಾಗೂ ಶುಂಠಿ ಬೆಳೆಯನ್ನ ಹೆಚ್ಚು ಬೆಳೆಯುತ್ತಾರೆ. ಇಲ್ಲಿಯ ಸಾವಿರಾರೂ ರೈತರು ಹವಾಮಾನ ಆಧಾರಿತ ಬೆಳೆವಿಮೆ ಮಾಡಿಸಿ, ಅದರ ಪ್ರಯೋಜನ ಪಡೆಯುತ್ತಿದ್ದರು. ಆದರೆ, ಈ ಬಾರಿ ಬೆಳೆವಿಮೆ ಕಂಪನಿಗಳು ಸರ್ಕಾರ ಹಾಗೂ ರೈತರ ಜೊತೆ ಚೆಲ್ಲಾಟವಾಡುತ್ತಿದ್ದಾರೆ. ಈ ಬಾರಿ ಮಳೆ ಇಲ್ಲದೆ ಹೆಚ್ಚುಹಾನಿಯಾಗುವ ಸಾಧ್ಯತೆ ಇದೆ.
ಹೆಚ್ಚಿನ ಹಣ ನೀಡಬೇಕಾಗುತ್ತೆ ಅಂತ ವಿಮಾ ಕಂಪನಿಯವರು ಹಿಂದೇಟು ಹಾಕುತ್ತಿದ್ದಾರೆ. ಮುಂಗಾರು ಮಳೆ ಪ್ರಾರಂಭವಾಗುತ್ತಿದ್ದಂತೆಯೇ ನೂರಾರು ಕಂಪನಿಗಳು ಬೆಳೆವಿಮೆ ಮಾಡಿಸಲು ಹಾಜರಾಗುತ್ತಿದ್ದವು. ಆದರೆ ಈ ಬಾರಿ ಮಳೆಯ ಪ್ರಮಾಣ ಕಡಿಮೆ ಆಗಿರುವ ಹಿನ್ನೆಲೆ ವಿಮಾ ಕಂಪನಿಗಳು ಟೆಂಡರ್ ಸಹ ಹಾಕಿಲ್ಲ.
ವಿಮಾ ಕಂಪನಿಗಳ ವರ್ತನೆಗೆ ಸರ್ಕಾರ ಕಡಿವಾಣ: ಸರ್ಕಾರ ಬೆಳೆವಿಮಾ ಕಂಪನಿಗಳು ಜೊತೆ ಮಾತನಾಡಿ ಈ ಕೂಡಲೇ ಟೆಂಡರ್ ಹಾಕುವಂತೆ ಮಾಡಬೇಕು. ಇಲ್ಲವೆ ಸರ್ಕಾರ ಇದಕ್ಕೆ ಮಾರ್ಗೋಪಾಯ ಕಂಡುಕೊಳ್ಳಬೇಕು. ಬೆಳೆ ಚೆನ್ನಾಗಿ ಬಂದಾಗ ರೈತರ ಹಣ ಕಟ್ಟಿಸಿಕೊಳ್ಳುವುದು, ಬೆಳೆ ಸರಿಯಾಗಿ ಬರುವುದಿಲ್ಲ ಎಂದು ತಿಳಿದಾಗ ಮುಂದೆ ಬರದ ವಿಮಾ ಕಂಪನಿಗಳ ವರ್ತನೆಗೆ ಸರ್ಕಾರ ಕಡಿವಾಣ ಹಾಕುವಂತೆ ರೈತರು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: 'ಬೆಳೆವಿಮೆಯಲ್ಲಿ ತಾರತಮ್ಯ ಹೋಗಲಾಡಿಸಿ, ಈರುಳ್ಳಿ ಬೆಳೆ ನಷ್ಟಕ್ಕೆ ಬೆಳೆವಿಮೆ ತುಂಬಿಕೊಡಿ'