ಹಾವೇರಿ: ಕಾನೂನು ಸುವ್ಯವಸ್ಥೆ ಕಾಪಾಡಲು ಹಾವೇರಿ ಪೊಲೀಸ್ ಇಲಾಖೆ ಮತ್ತು ನಗರಸಭೆಯ ಸಹಯೋಗದಲ್ಲಿ ನಗರದಲ್ಲಿ 24 ಸ್ಥಳಗಳಲ್ಲಿ ಹೊಸದಾಗಿ ಸಿಸಿಟಿವಿ ಕ್ಯಾಮರಾ ಅಳವಡಿಸಲಾಗಿದೆ.
ನಗರಸಭೆ 25 ಲಕ್ಷ ರೂಪಾಯಿ ಅನುದಾನದಲ್ಲಿ ನಗರದ ಪ್ರಮುಖ ರಸ್ತೆ ಮತ್ತು ವೃತ್ತಗಳಲ್ಲಿ ಈ ಸಿಸಿಟಿವಿಗಳನ್ನು ಅಳವಡಿಸಲಾಗಿದೆ. ಕ್ಯಾಮರಾ ದೃಶ್ಯವನ್ನು ಹಾವೇರಿ ನಗರ ಪೊಲೀಸ್ ಠಾಣೆಯಲ್ಲಿ ವೀಕ್ಷಿಸಲಾಗುತ್ತದೆ. ನಗರದಲ್ಲಿ ಸಿಗ್ನಲ್ ಜಂಪ್ ಮಾಡುವ, ಬೈಕ್ ವ್ಹೀಲಿಂಗ್ ಮತ್ತು ಬೈಕ್ ಕಳ್ಳತನಗಳ ನಡೆಯುವ ಪ್ರಮುಖ ಸ್ಥಳಗಲ್ಲಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಇದರಿಂದ ಹಾವೇರಿಯಲ್ಲಿ ಅಪರಾಧಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಲಿದೆ ಎಂದು ಎಸ್ಪಿ ಅಂಶು ಕುಮಾರ್ ತಿಳಿಸಿದ್ದಾರೆ.
ಈ ಹಿಂದೆ ನಗರದಲ್ಲಿ 34 ಪ್ರದೇಶಗಳಲ್ಲಿ ಸಿಸಿಟಿವಿ ಕ್ಯಾಮರಾ ಹಾಕಲಾಗಿತ್ತು. ಆದರೆ ಅವುಗಳಲ್ಲಿ ಬಹಳಷ್ಟು ಕ್ಯಾಮರಾಗಳು ಹಾಳಾಗಿದ್ದವು. ಇನ್ನೂ ಕೆಲವು ರಿಪೇರಿಯಲ್ಲಿದ್ದವು. ಹೀಗಾಗಿ ಅಪರಾಧ ಚಟುವಟಿಕೆಗಳ ಮೇಲೆ ನಿಯಂತ್ರಣ ಹಾಕುವುದು ಕಷ್ಟವಾಗಿತ್ತು. ಈಗ ಹೊಸದಾಗಿ 24 ಪ್ರದೇಶಗಳಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಸಲಾಗಿದ್ದು ನಗರದಲ್ಲಿ ನಡೆಯುವ ಹಲವು ಅಪರಾಧ ಚಟುವಟಿಗಳಿಗೆ ಕಡಿವಾಣ ಬೀಳಲಿದೆ ಎಂದು ಅಂಶುಕುಮಾರ್ ತಿಳಿಸಿದರು.
ಈ ಕುರಿತಂತೆ ಮಾತನಾಡಿದ ಹಾವೇರಿ ನಗರಸಭೆ ಮಾಜಿ ಅಧ್ಯಕ್ಷ ಸಂಜೀವಕುಮಾರ್ ನೀರಲಗಿ, ಪೊಲೀಸ್ ಇಲಾಖೆ ಹಲವು ಬಾರಿ ನಗರದಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಸುವ ಕುರಿತಂತೆ ಮನವಿ ಮಾಡಲಾಗಿತ್ತು. ಆದರೆ ಕಾರಣಾಂತರಗಳಿಂದ ವಿಳಂಬವಾಗಿತ್ತು. ಇದೀಗ ನಗರಸಭೆಯ ಸಾಮಾನ್ಯನಿಧಿಯಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಸುವ ಕುರಿತಂತೆ ತೀರ್ಮಾನ ಕೈಗೊಳ್ಳಲಾಗಿತ್ತು. ಇದರಿಂದ ವೇಗದ ಚಾಲನೆ ಮತ್ತು ಅಪಘಾತಗಳ ತಡೆಗೆ ಅನುಕೂಲವಾಗಲಿದೆ ಎಂದು ಸಂಜೀವಕುಮಾರ್ ತಿಳಿಸಿದರು.
ಇದಲ್ಲದೆ ನಗರದಲ್ಲಿ ಇನ್ನು ಅತ್ಯಾಧುನಿಕ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲು ಹಾವೇರಿ ಶಾಸಕ ಹಾಗೂ ವಿಧಾನಸಭೆ ಉಪಸಭಾಪತಿ ರುದ್ರಪ್ಪ ಲಮಾಣಿ 25 ಲಕ್ಷ ರೂಪಾಯಿ ಅನುದಾನ ನೀಡುವುದಾಗಿ ತಿಳಿಸಿದ್ದಾರೆ. ಅತಿಹೆಚ್ಚು ಕಳ್ಳತನವಾಗುವ ಪ್ರದೇಶಗಳು, ಅಪಘಾತಗಳಾಗುವ ಪ್ರದೇಶಗಲ್ಲಿ ಇದನ್ನು ಅಳವಡಿಸಿ ನಗರದಲ್ಲಿನ ಅಪರಾಧ ಸಂಖ್ಯೆಗಳನ್ನು ಕಡಿಮೆ ಮಾಡುವ ಪ್ರಯತ್ನ ಮಾಡಲಾಗುವುದು ಎಂದು ಸಂಜೀವಕುಮಾರ್ ನೀರಲಗಿ ತಿಳಿಸಿದರು.
ಈ ಕಾರ್ಯಕ್ಕೆ ನಗರಸಭೆಯ ಸದಸ್ಯರು ಕೈಜೋಡಿಸಿದ್ದು ನಗರನಿವಾಸಿಗಳ ಆತಂಕ ದೂರ ಮಾಡುವ ಪ್ರಯತ್ನ ಮಾಡಲಾಗಿದೆ. ಈ ಹಿಂದೆ ಹಾಕಲಾಗಿದ್ದು ಸಿಸಿಟಿವಿ ಕ್ಯಾಮರಾಗಳು ಕೆಲವು ಹಾಳಾಗಿವೆ ಇನ್ನು ಕೆಲವು ರಿಪೇರಿಯಲ್ಲಿವೆ. ಇವುಗಳನ್ನು ಸಹ ರಿಪೇರಿ ಮಾಡಿಸಿ ಸರಿಪಡಿಸಲಾಗುವುದು. ಹಾವೇರಿ ನಗರದ ನಿವಾಸಿಗಳು ನಿಶ್ಚಿಂತರಾಗಿ ಇರುವಂತೆ ಕೆಲಸ ಮಾಡುವುದಾಗಿ ಸಂಜೀವಕುಮಾರ್ ನೀರಲಗಿ ತಿಳಿಸಿದರು.
ನಗರಸಭೆ ಮತ್ತು ಹಾವೇರಿ ಪೊಲೀಸ್ ಇಲಾಖೆಯ ಈ ಕಾರ್ಯಕ್ಕೆ ಹಾವೇರಿ ನಿವಾಸಿಗಳು ಸಂತಸ ವ್ಯಕ್ತಪಡಿಸಿದ್ದಾರೆ. ನಾಗರಿಕರು ಇಲಾಖೆಗೆ ಎಲ್ಲ ರೀತಿಯ ಸಹಕಾರ ನೀಡುವುದಾಗಿ ತಿಳಿಸಿದ್ದಾರೆ.
ಇದನ್ನೂ ಓದಿ: ರೈತರಿಗೆ ಎಕರೆವಾರು ಪರಿಹಾರ ನೀಡುವ ನಿಟ್ಟಿನಲ್ಲಿ ಚಿಂತನೆ ಮಾಡುತ್ತೇವೆ: ಕೆ ಎನ್ ರಾಜಣ್ಣ