ಹಾವೇರಿ: ಜಿಲ್ಲಾ ಕೇಂದ್ರ ಹಾವೇರಿಯಲ್ಲಿ 26 ಜನವರಿ 2019 ರಲ್ಲಿ ಇಂದಿರಾ ಕ್ಯಾಂಟೀನ್ ಆರಂಭಿಸಲಾಗಿತ್ತು. ಆದರೆ ಈ ಕ್ಯಾಂಟೀನ್ ಕಾರ್ಯನಿರ್ವಹಿಸಿದ್ದಕ್ಕಿಂತ ಬಂದ್ ಆಗಿದ್ದೇ ಹೆಚ್ಚು. ಕಾಂಗ್ರೆಸ್ ಸರ್ಕಾರವಿದ್ದಾಗ ಆರಂಭವಾಗಿದ್ದ ಕ್ಯಾಂಟೀನ್ ಸರಿಯಾದ ಟೆಂಡರ್ದಾರರು ಸಿಗದಿದ್ದ ಕಾರಣ ಬಂದ್ ಆಗಿತ್ತು. ನಂತರ ಇಲ್ಲಿ ಕೆಲಸ ಮಾಡುವವರಿಗೆ ಸರಿಯಾದ ವೇತನ ಇಲ್ಲದೆ ಕೆಲ ಕಾಲ ಮುಚ್ಚಿತ್ತು. ಈಗ ಕಾಂಗ್ರೆಸ್ ಸರ್ಕಾರ ಮತ್ತೆ ಅಧಿಕಾರಕ್ಕೆ ಬಂದಿರುವುದರಿಂದ ಇಂದಿರಾ ಕ್ಯಾಂಟೀನ್ ಪುನಾರಂಭವಾಗಿದೆ.
ಬಡವರ ಹಸಿವು ನೀಗಿಸಲು ಸಿಎಂ ಸಿದ್ದರಾಮಯ್ಯ ಕನಸಿನ ಇಂದಿರಾ ಕ್ಯಾಂಟೀನ್ ನಂತರ ನಿರ್ಲಕ್ಷ್ಯಕ್ಕೆ ತುತ್ತಾಗಿತ್ತು. ಇದೀಗ ಮತ್ತೆ ಸಿದ್ದರಾಮಯ್ಯ ಎರಡನೇ ಬಾರಿ ಸಿಎಂ ಆಗಿದ್ದಾರೆ. ಕಡಿಮೆ ಹಣದಲ್ಲಿ ಉಪಹಾರ ಮತ್ತು ಭೋಜನ ನೀಡುವ ಇಂದಿರಾ ಕ್ಯಾಂಟೀನ್‌ನಲ್ಲಿ ಸಿಹಿ ತಿನಿಸು ಸಹ ಸಿಗುವ ಆಸೆಯಲ್ಲಿದ್ದಾರೆ ಇಂದಿರಾ ಕ್ಯಾಂಟೀನ್ ಪ್ರೇಮಿಗಳು.
ಬಡಪಾಯಿಗಳಿಗೆ ವರದಾನ.. ಬಡವರಿಗೆ ಮುಂಜಾನೆ ಉಪಹಾರ ಮತ್ತು ಮಧ್ಯಾಹ್ನ ರಾತ್ರಿ ಊಟ ನೀಡಲಾಗುತ್ತಿದೆ. ಮುಂಜಾನೆ 8 ಗಂಟೆಯಿಂದ 10 ಗಂಟೆಯವರೆಗೆ ಉಪಹಾರ. ಮಧ್ಯಾಹ್ನ 12.30 ರಿಂದ 3 ಗಂಟೆ ಮತ್ತು ಸಂಜೆ 6 ರಿಂದ 8 ರ ವರೆಗೆ ಊಟ ನೀಡಲಾಗುತ್ತಿದೆ. ವಾರದ ಪ್ರತಿದಿನ ಮುಂಜಾನೆ ಒಂದೊಂದು ಉಪಹಾರ ನೀಡಲಾಗುತ್ತದೆ. ಬೆಳಗ್ಗೆ ಇಡ್ಲಿ, ಫಲಾವ್, ಚಿತ್ರಾನ್ನ, ಉಪ್ಪಿಟ್ಟು, ಪುಳಿಯೋಗರೆ ಮತ್ತು ವಾಂಗೀಬಾತ್ ವಿತರಿಸಲಾಗುತ್ತಿದೆ.
ಮಧ್ಯಾಹ್ನ ಮತ್ತು ರಾತ್ರಿ ಅನ್ನ ಸಾಂಬಾರ್ ಮೊಸರನ್ನ ಮತ್ತು ಉಪ್ಪಿನಕಾಯಿ ಕೊಡಲಾಗುತ್ತಿದೆ. ಹಾವೇರಿ ನಗರದ ಪಶು ಆಸ್ಪತ್ರೆ ಆವರಣದಲ್ಲಿ ಇಂದಿರಾ ಕ್ಯಾಂಟೀನ್ ಸ್ಥಾಪಿಸಲಾಗಿದೆ. ಜಿಲ್ಲಾಸ್ಪತ್ರೆ ಶಾಲಾ ಕಾಲೇಜಗಳಿಗೆ ಕ್ಯಾಂಟೀನ್ ಹತ್ತಿರವಾಗಿದ್ದು, ಜಿಲ್ಲಾಸ್ಪತ್ರೆಗೆ ಬರುವ ರೋಗಿಗಳು, ಅವರ ಸಂಬಂಧಿಕರು, ಶಾಲಾ ಕಾಲೇಜು ವಿದ್ಯಾರ್ಥಿಗಳ ಹಸಿವನ್ನು ಕಡಿಮೆ ಹಣದಲ್ಲಿ ಈ ಕ್ಯಾಂಟೀನ್ ನೀಗಿಸುತ್ತಿದೆ.
ಕೂಲಿ ಕಾರ್ಮಿಕರು ನಿರ್ಗತಿಕರು ಸೇರಿದಂತೆ ರೈತರಿಗೆ ವರ್ತಕರಿಗೆ ಈ ಕ್ಯಾಂಟೀನ್ ಅನುಕೂಲವಾಗಿದೆ. ಬೆರಳೆಣಿಕೆಯಷ್ಟು ಇಂದಿರಾ ಕ್ಯಾಂಟೀನ್‌ಗಳಲ್ಲಿ ಹಾವೇರಿಯಲ್ಲಿರುವ ಕ್ಯಾಂಟೀನ್ ಮಾತ್ರ ಕಾರ್ಯನಿರ್ವಹಿಸುತ್ತಿದೆ. ಜಿಲ್ಲಾ ಕೇಂದ್ರಕ್ಕೆ ಕಾರ್ಯನಿಮಿತ್ತ ಆಗಮಿಸುವ ಸಾರ್ವಜನಿಕರು ಖಾಸಗಿ ಹೋಟೆಲ್‌ಗಳಲ್ಲಿ ಉಪಹಾರ ಮತ್ತು ಊಟ ಮಾಡಿದರೆ ನೂರಾರು ರೂಪಾಯಿ ನೀಡಬೇಕು. ಅದೇ ಇಂದಿರಾ ಕ್ಯಾಂಟೀನ್‌ನಲ್ಲಿ ಸೇವಿಸಿದರೆ 10 ರೂಪಾಯಿಯಲ್ಲಿ ಉಪಹಾರ ಮತ್ತು ಊಟ ಸಿಗುತ್ತೆ.
ಜಿಲ್ಲಾಡಳಿತದಿಂದ ಸಮಸ್ಯೆ ಬಗೆಹರಿಸುವ ಭರವಸೆ.. ನಗರದಲ್ಲಿರುವ ಈ ಕ್ಯಾಂಟೀನ್ ಸಹ ಕುಡಿಯುವ ನೀರು ಸೇರಿದಂತೆ ಸಣ್ಣಪುಟ್ಟ ಸಮಸ್ಯೆಗಳಿಂದ ಬಳಲುತ್ತಿದೆ. ಜಿಲ್ಲಾಡಳಿತ ಈಗಾಗಲೇ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದೆ. ಜಿಲ್ಲಾ ಕೇಂದ್ರದಲ್ಲಿರುವ ಇಂದಿರಾ ಕ್ಯಾಂಟೀನ್ ನೂರಾರು ಜನರ ಹಸಿವು ನೀಗಿಸುತ್ತಿದೆ. ಕ್ಯಾಂಟೀನ್ ರೀತಿ ಇದೇ ಕಾರ್ಯನಿರ್ವಹಿಸಲಿ. ನಮ್ಮೆಲ್ಲರ ಹಸಿವು ನೀಗಿಸುತ್ತಿರಲಿ ಎನ್ನುತ್ತಿದ್ದಾರೆ ಕ್ಯಾಂಟೀನ್ ಆಶ್ರಿತರು. ಕ್ಯಾಂಟೀನ್ ರುಚಿ ಶುಚಿಯಾದ ಆಹಾರ ಪೂರೈಸುತ್ತಿದ್ದು, ಇನ್ನಷ್ಟು ಗ್ರಾಹಕರು ಹೆಚ್ಚಾದರೆ ಇನ್ನೂ ಹೆಚ್ಚಿನ ಸೌಲಭ್ಯ ನೀಡುವ ಸಿದ್ಧತೆಯನ್ನು ಕ್ಯಾಂಟೀನ್ ಸಿಬ್ಬಂದಿ ಕೈಗೊಳ್ಳುವ ಉಮೇದಿನಲ್ಲಿದ್ದಾರೆ.
ಇದನ್ನೂ ಓದಿ: ಮೈಸೂರು: ₹25 ಕೋಟಿ ಮೌಲ್ಯದ ಅಂಬರ್ ಗ್ರೀಸ್ ವಶಕ್ಕೆ; ಮೂವರು ಸೆರೆ