ಹಾವೇರಿ: ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಇಂದಿರಾ ಕ್ಯಾಂಟೀನ್ನಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ ಎದುರಾಗಿದೆ. ಸಿಬ್ಬಂದಿಗೆ ವೇತನ ನೀಡದ ಕಾರಣ ಇದು ಸ್ಥಗಿತಗೊಂಡಿದೆ.
ಕಳೆದ ಮೂರು ದಿನಗಳಿಂದ ಇಲ್ಲಿಯ ಸಿಬ್ಬಂದಿ ಕ್ಯಾಂಟೀನ್ ಬಂದ್ ಮಾಡಿದ್ದಾರೆ. ಇಲ್ಲಿ ಕೆಲಸ ನಿರ್ವಹಿಸುತ್ತಿರುವ ಸಿಬ್ಬಂದಿಗೆ ಏಳು ತಿಂಗಳಿಂದ ವೇತನ ಸಿಕ್ಕಿಲ್ಲ. ಇಂದಿರಾ ಕ್ಯಾಂಟೀನ್ ಗುತ್ತಿಗೆ ಪಡೆದ ವ್ಯಕ್ತಿ ಶೋಯಬ್ ಅಹ್ಮದ್ ಈ ಕಡೆ ಮುಖಮಾಡಿಲ್ಲ ಎಂದು ಕ್ಯಾಂಟೀನ್ ಸಿಬ್ಬಂದಿ ಆರೋಪಿಸುತ್ತಿದ್ದಾರೆ.
ಜಿಲ್ಲಾಸ್ಪತ್ರೆಯ ಪಕ್ಕದಲ್ಲಿ ಇರುವ ಕಾರಣ ದಿನಕ್ಕೆ ನೂರಾರು ಜನ ಬಡವರು ಇಲ್ಲಿ ಉಪಹಾರ ಊಟ ಸೇವಿಸಲು ಬರುತ್ತಾರೆ. ಆದರೆ ಗುತ್ತಿಗೆದಾರನಿಗೆ ಇದನ್ನ ನಿಭಾಯಿಸಲು ಆಗುತ್ತಿಲ್ಲ. ಅಧಿಕಾರಿಗಳಿಗೆ ಈ ಕುರಿತಂತೆ ತಿಳಿಸಿದರೂ ಸಹ ಯಾವುದೇ ಪ್ರಯೋಜನವಾಗಿಲ್ಲ. ದಿನನಿತ್ಯ ನೂರಾರು ಜನರಿಗೆ ಊಟ ಬಡಿಸುತ್ತಿದ್ದ ನಮಗೆ ಏಳು ತಿಂಗಳಿಂದ ವೇತನ ನೀಡಿಲ್ಲ. ಅಲ್ಲದೆ ಸಾಲ ನೀಡಿದವರು ಬಂದು ತಮಗೆ ಕಿರುಕುಳ ನೀಡುತ್ತಿದ್ದಾರೆ. ಹೀಗಾಗಿ ಕ್ಯಾಂಟೀನ್ ಬಂದ್ ಮಾಡಿದ್ದೇವೆ ಎಂದಿದ್ದಾರೆ.
ಇನ್ನು ಸಂಬಂಧಪಟ್ಟ ಅಧಿಕಾರಿಗಳು ತಮ್ಮ ಸಮಸ್ಯೆಗೆ ಸ್ಪಂದಿಸುವಂತೆ ಮನವಿ ಮಾಡಿದ್ದಾರೆ. ಇದರಿಂದಾಗಿ ಜಿಲ್ಲೆಯಲ್ಲಿ ಆರಂಭವಾಗಿದ್ದ ಎರಡು ಇಂದಿರಾ ಕ್ಯಾಂಟೀನ್‌ಗಳಲ್ಲಿ ಒಂದು ಕ್ಯಾಂಟೀನ್ ಬಂದ್ ಆದಂತಾಗಿದೆ. ಹಿರೇಕೆರೂರು ಪಟ್ಟಣದಲ್ಲಿರುವ ಕ್ಯಾಂಟೀನ್ ಕಾರ್ಯನಿರ್ವಹಿಸುತ್ತಿದ್ದು ಇನ್ನು ಆರು ತಾಲೂಕುಗಳಲ್ಲಿ ಕ್ಯಾಂಟೀನ್ ಆರಂಭಗೊಂಡಿಲ್ಲ.