ಹಾವೇರಿ: ರಾಣೆಬೆನ್ನೂರು ತಾಲೂಕಿನ ಹುಣಸಿಕಟ್ಟಿ, ಕಾಕೋಳ, ಛತ್ರ ಗ್ರಾಮಗಳಲ್ಲಿ ಅಕ್ರಮವಾಗಿ ಕಲ್ಲಿನ ಕ್ರಷರ್ ಮತ್ತು ಕಲ್ಲು ಗಣಿಗಾರಿಕೆ ಘಟಕಗಳು ಅನುಮತಿ ಇಲ್ಲದೆ ನಡೆಯುತ್ತಿದ್ದು, ಗಣಿ ಇಲಾಖೆ ಮತ್ತು ತಹಶೀಲ್ದಾರ್ ಮೌನಕ್ಕೆ ಜಾರಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ರಾಣೆಬೆನ್ನೂರು ತಾಲೂಕಿನಲ್ಲಿ ಕಳೆದ ಐದು ವರ್ಷಗಳಿಂದ ಅಕ್ರಮ ಗಣಿಗಾರಿಕೆ ಘಟಕಗಳು ದಿನದಿಂದ ದಿನಕ್ಕೆ ತಲೆ ಎತ್ತುತ್ತಿವೆ. ಆದರೆ ಈವರೆಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆ ಆಗಲಿ, ರಾಣೆಬೆನ್ನೂರ ತಹಶೀಲ್ದಾರ್ ಆಗಲಿ ಗಣಿಗಾರಿಕೆ ಬಗ್ಗೆ ಗಮನ ಹರಿಸದ ಇರುವುದು ಹಲವು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.
ಸರ್ಕಾರದ ಅನುಮತಿ ಪಡೆದು ಕಲ್ಲು ಗಣಿಗಾರಿಕೆ ಮಾಡಬೇಕು ಎಂಬ ನಿಯಮಗಳನ್ನು ಗಾಳಿಗೆ ತೂರಿ ರಾಣೆಬೆನ್ನೂರು ತಾಲೂಕಿನಲ್ಲಿ ಕೆಲ ಪ್ರಭಾವಿಗಳು ಕ್ರಷರ್ಗಳ ಮೂಲಕ ಅಕ್ರಮವಾಗಿ ಕಲ್ಲು, ಜಲ್ಲಿ, ಸಾಗಾಣಿಕೆ ಮಾಡುತ್ತಿರುವುದು ಕಂಡು ಬಂದಿದೆ. 2018 ರಿಂದ ಈವರೆಗೆ ಯಾವುದೇ ಪರವಾನಗಿ ಪಡೆಯದೆ ಕಲ್ಲು ಗಣಿಗಾರಿಕೆ ನಡೆಸುವ ಮೂಲಕ ಸರ್ಕಾರಕ್ಕೆ ತೆರಿಗೆ ವಂಚನೆ ಮಾಡಿದ್ದಲ್ಲದೆ, ಪರಿಸರಕ್ಕೆ ಹಾನಿಯಾಗುವಂತೆ ಗಣಿಗಾರಿಕೆ ನಡೆಸಿ ಪರಿಸರ ನಾಶಕ್ಕೂ ಕಾರಣರಾಗುತ್ತಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.